La Paz, Bolivia: ರಾಜಧಾನಿ ಸಮೀಪ ನಿನ್ನೆ 18 ಟನ್ ಹೊಸ ನೋಟುಗಳನ್ನು ಸಾಗಿಸುತ್ತಿದ್ದ ಸೈನಿಕ ವಿಮಾನ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಕಮಾಂಡರ್ ತಿಳಿಸಿದ್ದಾರೆ. ಅಪಘಾತದಲ್ಲಿ ಸುಮಾರು ಹನ್ನೆರಡು ವಾಹನಗಳು ಹಾನಿಗೊಂಡಿದ್ದು, ನೋಟುಗಳು ನೆಲದ ಮೇಲೆ ಚದುರಿಬಿದ್ದು ಹೋಗಿ ಜನರು ಮುಗಿಬಿದ್ದು ಅವುಗಳನ್ನು ಸಂಗ್ರಹಿಸಲು ನೋಡುತ್ತಿದ್ದ ವಿಡಿಯೊ ವೈರಲ್ ಆಗಿದೆ.
ದುರ್ಘಟನೆಯಲ್ಲಿ 29 ಮಂದಿ ಗಾಯಗೊಂಡಿದ್ದು, ಬಹುತೇಕರು ವಿಮಾನ ಬಿದ್ದ ಸ್ಥಳದ ಸಮೀಪ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದವರು. ಮೃತರಲ್ಲಿ 12 ಪುರುಷರು (ಒಬ್ಬ ಸಿಬ್ಬಂದಿ ಸದಸ್ಯ ಸೇರಿ), ಆರು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ಪೊಲೀಸ್ ಕಮಾಂಡರ್ ಮಿರ್ಕೊ ಸೋಕೋಲ್ ತಿಳಿಸಿದ್ದಾರೆ.
ಫಾರೆನ್ಸಿಕ್ ತನಿಖಾಧಿಕಾರಿಗಳು ಅವಶೇಷಗಳಿಂದ ಶವಗಳನ್ನು ಹೊರತೆಗೆದು ಪರಿಶೀಲನೆ ನಡೆಸುತ್ತಿದ್ದರು. ಗಾಯಾಳುಗಳನ್ನು ಲಾ ಪಾಜ್ ಸಮೀಪದ ಎಲ್ ಅಲ್ಟೊ ನಗರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ವಿಮಾನ ನಿಲ್ದಾಣವೂ ಇದೇ ನಗರದಲ್ಲಿದೆ.
ರಕ್ಷಣಾ ಸಚಿವ ಮಾರ್ಸೆಲೋ ಸಲಿನಾಸ್ , Lockheed C-130 Hercules ಮಾದರಿಯ ‘ಹರ್ಕ್ಯುಲೀಸ್ ಸಿ-130’ ವಿಮಾನವು ಪೂರ್ವದ ಸಾಂತಾ ಕ್ರೂಸ್ ಡೆ ಲಾ ಸಿಯೆರಾ ನಗರದಿಂದ ಹೊಸದಾಗಿ ಮುದ್ರಿಸಲಾದ ಬೊಲಿವಿಯನ್ ನಾಣ್ಯಗಳನ್ನು ಸಾಗಿಸುತ್ತಿತ್ತು. ಎಲ್ ಆಲ್ಟೊ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ರನ್ವೇಯಿಂದ ತಪ್ಪಿ ಪಕ್ಕದ ಮೈದಾನದಲ್ಲಿ ಪತನಗೊಂಡಿದೆ. ಅಗ್ನಿಶಾಮಕ ದಳವು ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದೆ.
ವಿಮಾನದ ಅವಶೇಷಗಳು, ಧ್ವಂಸಗೊಂಡ ವಾಹನಗಳು ಮತ್ತು ರಸ್ತೆಯ ಮೇಲೆ ಚದರಿದ ಶವಗಳು ಕಾಣಿಸಿಕೊಂಡಿವೆ. ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವಾರ್ ಅವರ ಪ್ರಕಾರ ಕನಿಷ್ಠ 15 ವಾಹನಗಳು ಹಾನಿಗೊಂಡಿವೆ.
ಬೊಲಿವಿಯನ್ ವಾಯುಪಡೆಗೆ ಸೇರಿದ ಈ ವಿಮಾನವು ಲಾ ಪಾಜ್ಗೆ ಹಣ ಸಾಗಿಸುತ್ತಿತ್ತು. ಅಪಘಾತ ಸ್ಥಳದಲ್ಲಿ ಚದುರಿ ಬಿದ್ದ ನೋಟುಗಳನ್ನು ಸಂಗ್ರಹಿಸಲು ಜನರು ಹರಿದುಬಂದಿದ್ದು, 500ಕ್ಕೂ ಹೆಚ್ಚು ಸೈನಿಕರು ಮತ್ತು 100ಕ್ಕೂ ಹೆಚ್ಚು ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸಿವೆ.
