Home Uncategorized ಬ್ಯಾರಿ ಕ್ಷೇತ್ರ ಕಾರ್ಯಕ್ಕೆ ತಳಸ್ಪರ್ಶಿ ಅಧ್ಯಯನ : ಡಾ. ಅಬೂಬಕರ್ ಸಿದ್ದೀಕ್

ಬ್ಯಾರಿ ಕ್ಷೇತ್ರ ಕಾರ್ಯಕ್ಕೆ ತಳಸ್ಪರ್ಶಿ ಅಧ್ಯಯನ : ಡಾ. ಅಬೂಬಕರ್ ಸಿದ್ದೀಕ್

35
0

ಮಂಗಳೂರು: ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನವು ತಳಸ್ಪರ್ಶಿಯಾಗ ಬೇಕು. ಆವಾಗ ಮಾತ್ರ ಬ್ಯಾರಿ ಕ್ಷೇತ್ರ ಕಾರ್ಯದ ವಿಸ್ತರಣೆ ಸಾಧ್ಯ ಎಂದು ಮಂಗಳೂರು ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ನಡೆದ ಹಿರಿಯ ಸಾಹಿತಿ ಹಾಜಿ ಟಿ.ಎ. ಆಲಿಯಬ್ಬ ಜೋಕಟ್ಟೆ ಬರೆದ ‘ಬ್ಯಾರಿ:ನಾನು ಕಂಡಂತೆ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬ್ಯಾರಿ ಭಾಷೆಯಲ್ಲಿ ಸಾಹಿತ್ಯದ ಅನೇಕ ಪ್ರಕಾರಗಳು ಬಂದಿವೆ. ಆದರೆ ತಳಸ್ಪರ್ಶಿ ಅಧ್ಯಯನದ ಕೊರತೆ ಕಾಡುತ್ತಿವೆ. ಈ ನಿಟ್ಟಿನಲ್ಲಿ ಅಧ್ಯಯನ ಪೀಠವು ಕ್ಷೇತ್ರ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಆಲಿಯಬ್ಬ ಜೋಕಟ್ಟೆಯವರ ಈ ಅನುಭವ ಕಥನವು ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಆಕರ ಕೃತಿಯಾಗಲಿ ಎಂದು ಡಾ. ಅಬೂಬಕ್ಕರ್ ಸಿದ್ದೀಕ್ ಆಶಿಸಿದರು.

ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್. ಉದ್ಘಾಟಿಸಿದರು. ಕೃತಿಕಾರ ಆಲಿಯಬ್ಬ ಜೋಕಟ್ಟೆ ಕೃತಿ ರಚನೆಗೆ ಸಂಬಂಧಿಸಿದಂತೆ ತನ್ನ ಅನುಭವ ಹಂಚಿಕೊಂಡರು. ಪತ್ರಕರ್ತ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಮುಹಮ್ಮದ್ ಸ್ವಾದಿಕ್, ಆಯಿಶಾ ಝಹೀಮಾ, ಮುಹಮ್ಮದ್ ಸಿಮಕ್, ನೌಶೀನಾ ಅವರು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ವಿಚಾರ ಮಂಡಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ, ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿ ಪರಿಷತ್‌ನ ಅಧ್ಯಕ್ಷ ಖಾಲಿದ್ ಉಜಿರೆ, ‘ಮೇಲ್ತೆನೆ’ಯ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್, ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್ ಮಾತನಾಡಿದರು.

ಅಧ್ಯಯನ ಪೀಠದ ಸದಸ್ಯರಾದ ಸಮೀರಾ ಕೆ.ಎ. ಸ್ವಾಗತಿಸಿದರು. ಖಾಲಿದ್ ತಣ್ಣೀರುಬಾವಿ ವಂದಿಸಿದರು. ಶಹಲಾ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here