ಉಡುಪಿ, ಮೇ 17: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಅಡಿಯಲ್ಲಿ ಇರುವ ಬ್ರಹ್ಮಾವರ ಕೃಷಿ ಕಾಲೇಜನ್ನು ಮುಚ್ಚಲು ಹಿಂದಿನ ಸರಕಾರ ಆದೇಶಿಸಿದ್ದು ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದು ಸಿಐಟಿಯು ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೃಷಿಗೆ ಸಂಬಂಧಿಸಿದ ಯಾವುದೇ ಕಾಲೇಜು ಗಳಿಲ್ಲ. ಈಗ ಬ್ರಹ್ಮಾವರದಲ್ಲಿರುವ ಕೃಷಿ ಕಾಲೆಜನ್ನು ಮುಚ್ಚಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ಇಂದಿನ ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಸಾಧ್ಯವಾಗುವು ದಿಲ್ಲ. ಇದರಿಂದ ಕೃಷಿಯ ಬೆಳವಣಿಗೆ ಕುಂಠಿತವಾಗುತ್ತದೆ.
ಉಡುಪಿ ಜಿಲ್ಲೆಯು ಅನೇಕ ಸಂದರ್ಭಗಳಲ್ಲಿ ಸರಕಾರಿ ಹೂಡಿಕೆಯಿಂದ ವಂಚಿತವಾಗಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭವಾಗಿ ಈಗ ಮುಚ್ಚಲ್ಪಟ್ಟಿದೆ. ಇಎಸ್‌ಐ ಆಸ್ಪತ್ರೆಯನ್ನು ಬ್ರಹ್ಮಾವರದಲ್ಲಿ ಆರಂಭಿಸುವುದಾಗಿ ಹೇಳಿ ರೈತರಿಂದ ಭೂಮಿ ವಶಪಡಿಸಿಕೊಂಡಿದ್ದರೂ, ಜನಪ್ರತಿನಿಧಿಗಳು ಈ ಕಡೆಗೆ ಗಮನ ನೀಡಿಲ್ಲ ಎಂದು ಸಿಐಟಿಯು ಆರೋಪಿಸಿದೆ.
ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾದ ಸರಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಇನ್ನೂ ಜಾರಿಯಾಗಿಲ್ಲ. ಈಗ 10 ವರ್ಷಗಳಿಂದ ನಡೆಯುತ್ತಿದ್ದ ಕಾಲೇಜನ್ನು ಮುಚ್ಚುವುದು ಎಷ್ಟು ನ್ಯಾಯ ಎಂದು ಎಂದು ಪ್ರಶ್ನಿಸಿರುವ ಸಿಐಟಿಯು, ಸುಮಾರು 15 ಕೋಟಿ ರೂ.ಗಿಂತಲೂ ಹೆಚ್ಚಿಗೆ ಹೂಡಿಕೆ ಮಾಡಿ ಕಾಲೇಜನ್ನು ಆರಂಭಿಸಿದ್ದು ವಿದ್ಯಾರ್ಥಿನಿಯವರಿಗೆ ಒಂದು ವರ್ಷದ ಹಿಂದೆ ಉತ್ತಮ ಹಾಸ್ಟೆಲ್ ಕೂಡಾ ನಿರ್ಮಿಸಲಾಗಿದೆ ಎಂದು ಹೇಳಿದೆ.
ಇಂತಹ ಕಾಲೇಜನ್ನು ಮುಚ್ಚುವುದು ಸರಿಯಲ್ಲ. ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಡಿಪ್ಲೊಮಾ ಕೋರ್ಸ್ ಉಳಿಸಿಕೊಂಡು, ಪೂರ್ಣ ಪ್ರಮಾಣದ ಕೃಷಿ ಕಾಲೇಜನ್ನು ಪ್ರಾರಂಭಿಸಬೇಕು. ಸರಕಾರ ಮತ್ತು ಜನ ಪ್ರತಿನಿಧಿಗಳು ಈ ಕುರಿತು ಗಮನ ನೀಡದೆ ಹೋದಲ್ಲಿ, ಜಿಲ್ಲೆಯ ಜನತೆಯನ್ನು ಒಗ್ಗೂಡಿಸಿ ನಿರಂತರ ಹೋರಾಟ ನಡೆಸ ಲಾಗುವುದು ಎಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.