Home Uncategorized ಬ್ರಿಟಿಷರ ಕಾಲದಲ್ಲಿ ನೀಡಿದ ಸಾವಿರಾರು ಎಕರೆ ಅರಣ್ಯ ಭೂಮಿ ವಾಪಸ್ ಪಡೆಯಲು ಸೂಚಿಸಿದ್ದೇನೆ: ಸಚಿವ...

ಬ್ರಿಟಿಷರ ಕಾಲದಲ್ಲಿ ನೀಡಿದ ಸಾವಿರಾರು ಎಕರೆ ಅರಣ್ಯ ಭೂಮಿ ವಾಪಸ್ ಪಡೆಯಲು ಸೂಚಿಸಿದ್ದೇನೆ: ಸಚಿವ ಈಶ್ವರ್ ಖಂಡ್ರೆ

14
0

ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ 7500 ಎಕರೆ ಅರಣ್ಯ ಭೂಮಿಯನ್ನು ಬ್ರಿಟಿಷರು ಕೆಲವು ಎಸ್ಟೇಟ್ ಕಂಪನಿಗಳಿಗೆ ದೀರ್ಘ ಕಾಲದ ಅವಧಿಗೆ ಗುತ್ತಿಗೆ ನೀಡಿದ್ದರು. ಇದರಿಂದಾಗಿ ಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಈ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಪಡೆದು ಅರಣ್ಯ ವಿಸ್ತರಿಸಲು ಕಾನೂನು ಹೋರಾಟ ಮುಂದುವರೆಸುವಂತೆ ಸೂಚಿಸಿದ್ದೇನೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ನಗರದ ಅರಣ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಟೇಟ್ ಗಳಿಗೆ ನೀಡಲಾಗಿರುವ ಅರಣ್ಯ ಭೂಮಿ ಗುತ್ತಿಗೆದಾರರಿಂದ ಬರಬೇಕಾದ ಬಾಕಿ ಮತ್ತು ಅವಧಿ ಮುಗಿದ ಅರಣ್ಯ ಭೂಮಿ ವಾಪಾಸ್‌ ಪಡೆಯಲು ವಿಶೇಷ ತಂಡ ಮತ್ತು ಕಾನೂನು ಕೋಶವನ್ನು ರಚಿಸಲಾಗಿದೆ. ಈ ವಿಶೇಷ ತಂಡ ಗುತ್ತಿಗೆ ನೀಡಿದ ಅರಣ್ಯ ಭೂಮಿಯನ್ನು ಮರು ಪಡೆಯಲು ಕಾರ್ಯೋನ್ಮುಖವಾಗುತ್ತದೆ ಎಂದರು.

ಕೆಲವು ವರ್ಷಗಳ ಹಿಂದೆ ಹಾಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಬಿ.ಪಿ. ರವಿ ಅವರು, ಚಾಮರಾಜನಗರದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದಾಗ ಕೆಲವು ಕಂಪನಿಗಳು ಗುತ್ತಿಗೆ ಹಣವನ್ನು ಅರಣ್ಯ ಇಲಾಖೆಗೆ ಪಾವತಿಸಿಲ್ಲ ಎಂದು ನೋಟಿಸ್ ನೀಡಿದ್ದರು. ಈಗ ಎಸ್ಟೇಟ್ ನವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ಕಾನೂನು ಹೋರಾಟ ಮಾಡಲು ವಿಶೇಷ ತಂಡ ರಚಿಸಿದ್ದೇವೆ ಎಂದರು

ಬಂಡೀಪುರ ಅರಣ್ಯ ಪ್ರದೇಶ ವನ್ಯ ಜೀವಿಗಳ ಆವಾಸಸ್ಥಾನವಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಂಡೀಪುರ ಅರಣ್ಯದೊಳಗೆ ಇರುವ ರಸ್ತೆ ಮಾರ್ಗವಾಗಿ ಕೇರಳಕ್ಕೆ ಹೋಗಲು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಅವಕಾಶ ನೀಡಲಾಗಿದೆ. ರಾತ್ರಿ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಇದು ಮುಂದುವರಿಯುತ್ತದೆ. ಕೆಲವು ವಿಶೇಷ ಸಂದರ್ಭ ಅಂದರೆ ವೈದ್ಯಕೀಯ ತುರ್ತು ಇತ್ಯಾದಿ ಸಂದರ್ಭದಲ್ಲಿ ಪರಿಶೀಲಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ:

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅತ್ಯಗತ್ಯವಾಗಿದೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದೆ. ಹೀಗಾಗಿ ಬೆಳೆ ಹಾನಿ ಆಗದಂತೆ ಮತ್ತು ಜೀವ ಹಾನಿ ಆಗದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ಅರಣ್ಯ ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದರು.

ಆನೆ ದಾಳಿ ಸಾವು ದುರ್ದೈವ:

ಕರ್ನಾಟಕದ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಆನೆಯೊಂದು ಕೇರಳದಲ್ಲಿ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ಅತ್ಯಂತ ದುಃಖ ಮತ್ತು ದುರ್ದೈವದ ಸಂಗತಿಯಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಕಾಡ್ಗಿಚ್ಚಿನ ಬಗ್ಗೆ ಎಚ್ಚರಿಕೆ:

ಬರುವ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಫೈರ್ ಲೈನ್ ಅಂದರೆ ಬೆಂಕಿ ರೇಖೆಯನ್ನು ನಿರ್ಮಿಸಲಾಗಿದೆ. ಅಗ್ನಿ ಶಾಮಕ ದಳದೊಂದಿಗೆ ಕೂಡ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಧಿಕೃತ ವರದಿ ಇದೆ. ಆದರೆ, ಇನ್ನೂ ಹೆಚ್ಚಿನ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ಒತ್ತುವರಿಯ ನಿಖರ ಮಾಹಿತಿ ನೀಡುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಸ್ವಾರ್ಥಕ್ಕಾಗಿ ಹತ್ತಾರು ಎಕರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ಒತ್ತುವರಿ ತೆರವು ಮಾಡಲಾಗುವುದು ಎಂದರು.

LEAVE A REPLY

Please enter your comment!
Please enter your name here