ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾನಿಲಯದ ರಾಮಾನುಜನ್ ಕಾಲೇಜು ಶ್ರೀಮದ್ ಭಗವದ್ಗೀತೆ ಕುರಿತು ನೀಡುವ ಸರ್ಟಿಫಿಕೆಟ್ ಹಾಗೂ ಪುನಶ್ಚೇತನ ಕೋರ್ಸ್ ಗೆ ಕಡ್ಡಾಯ ನೋಂದಣಿ ಹಾಗೂ ಹಾಜರಾತಿಯನ್ನು ಹಿಂಪಡೆಯುವಂತೆ ಅಧ್ಯಾಪಕರ ಸಂಘಟನೆ ‘ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್’ಆಗ್ರಹಿಸಿದೆ.
ಈ ಕುರಿತು ಬುಧವಾರ ಈ ಹೇಳಿಕೆ ನೀಡಿರುವ ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಗವದ್ಗೀತೆ ಸರ್ಟಿಫಿಕೆಟ್ ಕೋರ್ಸ್ ಗೆ ನೋಂದಾಯಿಸುವಂತೆ ಬಲವಂತಪಡಿಸಲಾಗುತ್ತಿದೆ ಎಂದು ಹೇಳಿದೆ. ಅಲ್ಲದೆ, ಈ ನಡೆ ಕಾಲೇಜಿನ ಆಡಳಿತ ಮಂಡಳಿಯ ನಿರುಂಕುಶಾಧಿಕಾರವನ್ನು ಪ್ರತಿಬಿಂಬಿಸಿದೆ ಎಂದಿದೆ.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಅವರ ಕಚೇರಿ ಅವಧಿ ಮುಗಿದ ಬಳಿಕವೂ ಕೋರ್ಸ್ ಗೆ ಹಾಜರಾಗುವಂತೆ ಕಾಲೇಜು ಬಲವಂತಪಡಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಈ ಕುರಿತಂತೆ ರಾಮಾನುಜನ್ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಲಾಗಿದೆ ಹಾಗೂ ಪಠ್ಯ ಸಂದೇಶ ರವಾನಿಸಲಾಗಿದೆ. ಆದರೆ, ಅವರು ಯಾವುದೇ ಪ್ರತಿಕ್ರಿಯಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
‘‘ಶ್ರೀಮದ್ಭವದ್ಗೀತೆಯ ಪುನಶ್ಚೇತನ ಹಾಗೂ ಸರ್ಟಿಫಿಕೆಟ್ ಕೋರ್ಸ್ ಗೆ ಕಡ್ಡಾಯವಾಗಿ ನೋಂದಾಯಿಸಲು ಹಾಗೂ ಹಾಜರಾಗಲು ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಆದೇಶಿಸಲು ರಾಮಾನುಜನ್ ಕಾಲೇಜಿನ ಪ್ರಾಂಶುಪಾಲ ಎಸ್.ಪಿ. ಅಗರ್ವಾಲ್ ಅವರು ಅಧಿಕಾರವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ’’ ಎಂದು ಡಿಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.