Home Uncategorized ಮಂಗಳೂರು: ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಮಂಗಳೂರು: ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

25
0

ಮಂಗಳೂರು: ಮಂಗಳೂರು ನಗರದ ವಿಕಾಸ ಕಚೇರಿಯಲ್ಲಿ ಹೊಸವರ್ಷದ ಸ್ನೇಹಕೂಟ ಮತ್ತು ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಭೆಯ ಮುಖ್ಯ ಅತಿಥಿಗಳಾಗಿರುವ ಜನಪದ ವಿದ್ವಾಂಸರಾಗಿರುವ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡುತ್ತಾ ಇಂದು ದೇಶದ ಪ್ರಗತಿ ಎಂದರೆ ಆರ್ಥಿಕ ಪ್ರಗತಿ ಎಂದಿದೆ. ನಿಜಕ್ಕೂ ಅಭಿವೃದ್ಧಿ ಎಂದರೆ ಜನರ ಜೀವನ ಮಟ್ಟದಲ್ಲಿ ಆಗಬೇಕಿತ್ತು. ಆದರೆ ಭಾರತದ ಜನತೆಯ ಬದುಕಿನ ಬದಲಾವಣೆ ಕನಸ್ಸಾಗಿಯೇ ಉಳಿದಿದೆ.‌ ಕಡು ಬಡತನದ 150 ದೇಶಗಳ ಪಟ್ಟಿಯಲ್ಲಿ ಭಾರತ 112 ನೇ ಸ್ಥಾನದಲ್ಲಿದೆ ಆದರೆ ಕಳೆದ 9 ವರ್ಷದಲ್ಲಿ ದೇಶವು ಸಂಪೂರ್ಣ ಪ್ರಗತಿ ಸಾಧಿಸಿದೆ ಎಂಬ ಕೇಂದ್ರ ಸರ್ಕಾರದ ಸುಳ್ಳುಗಳ ಜೊತೆಗೆ ದೇಶದ ಯುವಜನರನ್ನು ಕೋಮುವಾದೀಕರಗೊಳಿಸಿ ಏಕ ಸಂಸ್ಕೃತಿಯನ್ನು ಹೇರುತ್ತಾ ಭಾರತದ ಬಹುತ್ವವನ್ನು ಒಡೆಯುವ ಪ್ರಯತ್ನಗಳು ಸಾಗಿವೆ. ಕಳೆದ ಚುನಾವಣಾ ಸಂದರ್ಭ ಪುಲ್ವಾಮಾ ದಾಳಿ ಮತ್ತು ಈ ಚುನಾವಣೆಗೆ ರಾಮಮಂದಿರವನ್ನು ಜನರ ಮುಂದಿರಿಸಿ ಈ ಮಧ್ಯೆ ನಡೆದ ಕೇಂದ್ರದ ಅನೇಕ ಹಗರಣಗಳ ಚರ್ಚೆ ಗೌನವಾಗಿದೆ. ಇಂತಹ ಜನರ ಬದುಕಿನ ವಿಚಾರದ ಗಂಭೀರ ಚರ್ಚೆಗಳು ಡಿವೈಎಫ್ಐ ಸಮ್ಮೇಳನದ ಭಾಗವಾಗಿ ನಡೆಯಲಿ. ದೇಶದ ಜಾತ್ಯಾತೀತತೆಯನ್ನು ಬಯಸುವ ಬಹುತ್ವವನ್ನು ಬೆಂಬಲಿಸುವ ಜನತೆ ಈ ದುರಿತ ಕಾಲದಲ್ಲಿ ನಿರಾಸೆಗೊಳ್ಳುವ ಅಗತ್ಯವಿಲ್ಲ. ಭಾರತ ಪ್ರಕಾಶಿಸುತ್ತಿದೆ ಎಂದು ಸುಳ್ಳನ್ನು ವ್ಯಾಪಕವಾಗಿ ಬಿತ್ತರಿಸಿದ ವಾಜಪೇಯಿ ಸರ್ಕಾರವನ್ನು ಜನತೆ ಸೋಲಿಸಿದ ಇತಿಹಾಸ ನಮ್ಮ ಮುಂದಿದೆ ಎಂದರು.

ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ರಾಜ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಸೌಹಾರ್ದತೆ, ಸಾಮರಸ್ಯ ಇಂದು ದೇಶದಲ್ಲಿ ಬಹುದೊಡ್ಡ ಬೆದರಿಕೆಯನ್ನು ಎದುರಿಸುತ್ತಿದೆ. ಘನತೆಯ ಬದುಕನ್ನು ಜನತೆ ಕಳೆದುಕೊಳ್ಳುತ್ತಿದೆ. ಶಿಕ್ಷಣ, ಆರೋಗ್ಯಕ್ಕಾಗಿ ನಾವು ಯಾರ್ಯಾರಿಗೋ ಕೈ ಚಾಚುವ ದಯನೀಯ ಸ್ಥಿತಿ ಇಂದು ನಮ್ಮದಾಗಿದೆ. ಚುನಾವಣೆಗಳ ಫಲಿತಾಂಶದಿಂದ ಬದಲಾವಣೆಗಳು ಬರುವುದಿಲ್ಲ. ಕರ್ನಾಟಕದಲ್ಲಿ ಜಾತ್ಯಾತೀತರೆ ನಿಸಿಕೊಂಡ ಪಕ್ಷಗಳು ಕೂಡ ಕೋಮುವಾದದ ವಿರುದ್ಧದ ಸೈದ್ಧಾಂತಿಕ ಹೋರಾಟದಲ್ಲಿ ಸೋತಿದೆ. ಆದರೆ ಡಿವೈಎಫ್ಐ ಜನತೆಯನ್ನು ಎಚ್ಚರಿಸುವ ಕಾರ್ಯದಲ್ಲಿ ಸೋತಿಲ್ಲ ಎಂದರು.

ವೇದಿಕೆಯಲ್ಲಿ ಸಮ್ಮೇಳನ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ವಾಗತ ಸಮಿತಿಯ ಮಹಾ ಪೋಷಕರಾದ ಡಾ ವಸಂತ ಕುಮಾರ್ , ಕೆ ಯಾದವ ಶೆಟ್ಟಿ, ಫ್ಲೆವಿ ಕ್ರಾಸ್ತಾ , ಉಪಸ್ಥಿತರಿದ್ದರು. ಡಿವೈಎಫ್ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ವಂದಿಸಿದರು.

LEAVE A REPLY

Please enter your comment!
Please enter your name here