ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಾಲಕಿಯನ್ನು ಥಳಿಸಿ, ಕೈಕೋಳ ಹಾಕಿದ ಘಟನೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಕೆಎಸ್‌ಪಿಸಿಆರ್‌ಸಿ) ಅಧ್ಯಕ್ಷ ಕೆ. ನಾಗಣ್ಣ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರು: ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಾಲಕಿಯನ್ನು ಥಳಿಸಿ, ಕೈಕೋಳ ಹಾಕಿದ ಘಟನೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಕೆಎಸ್‌ಪಿಸಿಆರ್‌ಸಿ) ಅಧ್ಯಕ್ಷ ಕೆ. ನಾಗಣ್ಣ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರು ಮಂಗಳೂರು ನಗರ ಪೊಲೀಸ್ ಮತ್ತು ಅಬಕಾರಿ ಇಲಾಖೆಯಿಂದ ಪ್ರತ್ಯೇಕ ವರದಿ ಕೇಳಿದ್ದಾರೆ. ಶನಿವಾರ ಮಾಧ್ಯಮ ಪ್ರತಿನಿಧಿಗಳು ವೈರಲ್ ವಿಡಿಯೋ ಕುರಿತು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಸಹಜ ಮತ್ತು ಆಕ್ರಮಣಕಾರಿ ನಡವಳಿಕೆಯಿಂದಾಗಿ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 6.50 ರ ಸುಮಾರಿಗೆ ಪಂಪ್‌ವೆಲ್‌ನಲ್ಲಿರುವ ಗಣೇಶ್ ಮೆಡಿಕಲ್ಸ್‌ನಿಂದ ಅಬಕಾರಿ ಅಧಿಕಾರಿಗಳು ಬಾಲಕಿಯನ್ನು ಕರೆದೊಯ್ದಿದ್ದಾರೆ ಎಂದಿದ್ದಾರೆ.
ಆಕೆ ಡ್ರಗ್ಸ್ ಸೇವಿಸಿರಬಹುದು ಎಂಬ ಶಂಕೆ ಮೇರೆಗೆ ಆಕೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಆಕೆ ವಾಹನದಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ. ಹೀಗಾಗಿ, ಅಬಕಾರಿ ಅಧಿಕಾರಿಗಳು ಆಕೆಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
‘ಪೊಲೀಸರಿಗೆ ಸಂವೇದನಾಶೀಲರಾಗಿರಲು ತರಬೇತಿ ನೀಡುತ್ತೇವೆ’
ಹುಡುಗಿ ಅಸ್ವಾಭಾವಿಕ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸಿದ್ದು ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಆಕೆಯನ್ನು ನಿಯಂತ್ರಿಸಲು ಮಹಿಳಾ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಬೇಕಾಯಿತು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಕಮಿಷನರ್ ಹೇಳಿದರು.
ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ಬಾಲಕಿಯನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆಕೆ ಈ ರೀತಿ ವರ್ತಿಸಿದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಭಾನುವಾರ ಕೆಎಸ್‌ಸಿಪಿಸಿಆರ್ ಅಧ್ಯಕ್ಷರಿಗೆ ಸುದ್ದಿ ತಲುಪಿದ್ದು, ಅವರು ಪೊಲೀಸ್ ಕಮಿಷನರ್ ಮತ್ತು ಮಂಗಳೂರು ಪೂರ್ವ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಈ ಕುರಿತು ಟಿಎನ್ಐಇ ಜೊತೆಗೆ ಮಾತನಾಡಿದ ಅವರು, ಬಾಲಕಿಗೆ ಎಷ್ಟು ವಯಸ್ಸು ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಮತ್ತು ಆಕೆ ಅಪ್ರಾಪ್ತಳಾಗಿದ್ದರೆ, ಆಯೋಗವು ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುತ್ತದೆ ಎಂದರು.
ಬಾಲಕಿ ಎಂಬುದನ್ನು ನೋಡದೆ ಪೊಲೀಸರು ಆಕೆಯನ್ನು ನಡೆಸಿಕೊಂಡ ರೀತಿ ನೋಡಿದರೆ ಇಂತಹ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವಲ್ಲಿ ಪೊಲೀಸರಿಗೆ ತರಬೇತಿಯ ಕೊರತೆ ಎದ್ದು ಕಾಣುತ್ತಿದೆ ಎಂದ ಅವರು, ಲೀಗಲ್ ಸೆಲ್ ಮೂಲಕ ತರಬೇತಿ ಕೋರ್ಸ್ ಆಯೋಜಿಸುವುದಾಗಿ ತಿಳಿಸಿದರು.
‘ಬಾಲಕಿ ಸಾಮಾನ್ಯ ಪರಿಸ್ಥಿತಿಗೆ ತಲುಪಲು ಸ್ವಲ್ಪ ಸಮಯ ಕಾಯಬೇಕಿತ್ತು ಮತ್ತು ನಂತರ ಆಕೆಗೆ ಸಲಹೆ ನೀಡಬೇಕಿತ್ತು. ಬಲವಂತದ ಕ್ರಮಗಳು ಒತ್ತಡ ಮತ್ತು ಭಯಕ್ಕೆ ಕಾರಣವಾಗುತ್ತವೆ ಹಾಗೂ ಹೆಚ್ಚು ಗಂಭೀರ ತಿರುವನ್ನು ಪಡೆದುಕೊಳ್ಳಬಹುದು. ಅದು ಸರಿಯಾದ ಕ್ರಮವಲ್ಲ’ ಎಂದರು.
ಘಟನೆಯ ಎರಡು ವಿಡಿಯೋಗಳು ವೈರಲ್ ಆಗಿವೆ.