ಪಿಂಚಣಿ ಉಪದಾನ ಪತ್ರಕ್ಕೆ ಸಹಿ ಹಾಕಲು 5 ಲಕ್ಷ ರೂಪಾಯಿ ಲಂಚ ಕೇಳಿದ ಅನುದಾನಿತ ಶಾಲಾ ಸಂಚಾಲಕಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಜ್ಪೆಯ ಶಾಲೆಯೊಂದರಲ್ಲಿ ನಡೆದಿದೆ. ಮಂಗಳೂರು: ಪಿಂಚಣಿ ಉಪದಾನ ಪತ್ರಕ್ಕೆ ಸಹಿ ಹಾಕಲು 5 ಲಕ್ಷ ರೂಪಾಯಿ ಲಂಚ ಕೇಳಿದ ಅನುದಾನಿತ ಶಾಲಾ ಸಂಚಾಲಕಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಜ್ಪೆಯ ಶಾಲೆಯೊಂದರಲ್ಲಿ ನಡೆದಿದೆ.
ಬಜಪೆ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯಕ್ತ ಬಲೆಗೆ ಬಿದ್ದ ಆರೋಪಿ. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿದ್ದ ಶೋಭಾರಾಣಿ ಅವರ ನಿವೃತ್ತಿ ಹಾಗೂ ಉಪದಾನ ದಾಖಲೆಗಳಿಗೆ ಶಾಲಾ ಸಂಚಾಲಕರು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕಾಗಿತ್ತು.
ನಿವೃತ್ತಿಯಾಗಲಿರುವ ಮುಖ್ಯ ಶಿಕ್ಷಕಿ ಶೋಭಾ ರಾಣಿಯವರು ತಮ್ಮ ಪಿಂಚಣಿ ದಾಖಲೆಗೆ ಸಹಿ ಹಾಕಿ ಅನುಮೋದನೆಗೆ ಸ್ಥಳೀಯ ಶಿಕ್ಷಣ ಅಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿಗೆ ಮನವಿ ಮಾಡಿಕೊಂಡರು. ಅದಕ್ಕೆ ಜ್ಯೋತಿ ಪೂಜಾರಿ 5 ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಲೋಕಾಯುಕ್ತ ಪೊಲೀಸರು ನಿನ್ನೆ ದಾಳಿ ನಡೆಸಿ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜ್, ಇನ್ಸ್ ಪೆಕ್ಟರ್ ಕಲಾವತಿ, ವಿನಾಯಕ ಬಿಲ್ಲವ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.