Home Uncategorized ಮಗಳು ಮೃತಪಟ್ಟಿದ್ದರೂ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇರುತ್ತದೆ: ಹೈಕೋರ್ಟ್

ಮಗಳು ಮೃತಪಟ್ಟಿದ್ದರೂ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇರುತ್ತದೆ: ಹೈಕೋರ್ಟ್

28
0

ಬೆಂಗಳೂರು: ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಮುನ್ನವೇ ಮಗಳು ಮೃತಪಟ್ಟಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇಲ್ಲ ಎಂದು ಹೇಳಲು ಬರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೆಣ್ಣು ಮಕ್ಕಳಿಗೆ ಉತ್ತರಾಧಿಕಾರ ಆಸ್ತಿ ಹಕ್ಕುಗಳನ್ನು ನೀಡಲು ಕಾಯ್ದೆಗೆ ತಿದ್ದುಪಡಿಯಾದ ಅವಧಿಗೆ(2005ರ ಸೆ.9ಕ್ಕೆ) ಮುನ್ನವೇ ಮಹಿಳೆ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಪೂರ್ವಜರ ಆಸ್ತಿಯ ಮೇಲಿನ ಆಸ್ತಿಯ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ತೀರ್ಪುನಲ್ಲಿ ತಿಳಿಸಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ ಚನ್ನಬಸಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ಹೈಕೋರ್ಟ್ ನ್ಯಾಯಪೀಠ, ವಿನೀತಾ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ಪೀಠವು ಈ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಜನ್ಮದಿಂದ ಬಂದಿರುವುದೇ ವಿನಹ ಉತ್ತರಾಧಿಕಾರದಿಂದ ಬರುವುದಿಲ್ಲ. ಅವರು ಜೀವಂತವಾಗಿದ್ದಾರೆ ಇಲ್ಲವೇ ಎನ್ನುವುದು ಅಪ್ರಸ್ತುತ. ಹೀಗಾಗಿ, ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲುದಾರರಾಗಿರುತ್ತಾರೆ. 2005ರಲ್ಲಿ ಹೆಣ್ಣು ಮಗಳು ಕಾನೂನು ಬದ್ಧ ವಾರಸುದಾರರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪೀಠ ತಿಳಿಸಿದೆ.

ಕಾಯಿದೆಯ ಸೆಕ್ಷನ್ 6(1)(ಎ) ಪ್ರಕಾರ ಗಂಡು ಮಗುವಿನಂತೆ ಹೆಣ್ಣು ಮಗಳನ್ನೂ ಸೇರಿಸಲಾಗಿದೆ. ಅದರಂತೆ 2005ರ ತಿದ್ದುಪಡಿಗೆ ಅನುಗುಣವಾಗಿ ಹೆಣ್ಣು ಮಕ್ಕಳನ್ನು ಪಾಲುದಾರಿಕೆಯಿಂದ ಕೈಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?: ದಾಯಾದಿಗಳಾದ ಮೃತ ನಾಗವ್ವ ಮತ್ತು ಸಂಗವ್ವ ಎಂಬುವರಿಗೆ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು(ಮೃತರ ವಾರಸುದಾರರಿಗೆ) ನೀಡುವಂತೆ ಗದಗದ ಪ್ರಧಾನ ಸಿವಿಲ್ ನ್ಯಾಯಾಧೀಶರು 2023ರ ಅ.3ರಂದು ನೀಡಿದ್ದ ಆದೇಶ ಪ್ರಶ್ನಿಸಿ ಅರ್ಜಿದಾರ ಚನ್ನಬಸಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯಿದೆ 2005ಕ್ಕೂ ಮುನ್ನ ಸಂಗವ್ವ, ನಾಗವ್ವ ಸಾವನ್ನಪ್ಪಿದ್ದಾರೆ. ಅವರಿಗೆ ಆಸ್ತಿಯಲ್ಲಿ ಭಾಗ ನೀಡಲು ಅವಕಾಶವಿಲ್ಲ. ಹೀಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ತಿದ್ದುಪಡಿ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

LEAVE A REPLY

Please enter your comment!
Please enter your name here