ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್‌ನಲ್ಲಿ 1,000ಕ್ಕೂ ಹೆಚ್ಚು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್‌ನಲ್ಲಿ 1,000ಕ್ಕೂ ಹೆಚ್ಚು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಈಶಾನ್ಯ ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳ ಕಟ್ಟುನಿಟ್ಟಿನ ರಕ್ಷಣೆಗಾಗಿ ಪ್ರತಿಭಟನಾಕಾರರು ಕರೆ ನೀಡಿದರು. ಈ ಶಾಂತಿಯುತ ಪ್ರತಿಭಟನೆಯಲ್ಲಿ ಹಲವು ಕಾರ್ಯಕರ್ತರು, ನಾಗರಿಕರು ಕಪ್ಪು ಬಟ್ಟೆ ಧರಿಸಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮಣಿಪುರದ ಇಬ್ಬರು ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆಯರು
ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಗ್ಲೋಬಲ್ ಕನ್ಸರ್ನ್ ಆಫ್ ಇಂಡಿಯಾದ ಸಂಸ್ಥಾಪಕಿ ಬೃಂದಾ ಅಡಿಗೆ ಮಾತನಾಡಿ, “ನಮಗೆ ಮಣಿಪುರದ ಮಹಿಳೆಯರಿಗೆ ಶಾಂತಿ, ಪರಿಹಾರ ಮತ್ತು ಪುನಶ್ಚೈತನ್ಯಕಾರಿ ನ್ಯಾಯದ ಅಗತ್ಯವಿದೆ ಮತ್ತು ಸರ್ಕಾರವು ಈಗಲೇ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಹೇಳಿದರು. ರಾಜ್ಯದಲ್ಲಿ ಮತ್ತು ದೇಶಾದ್ಯಂತ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ಅವರು ಸಾಕಷ್ಟು ಧ್ವನಿ ನೀಡಿದ್ದಾರೆ.
ಮಹಿಳಾ ಆಯೋಗ, ಬೆಂಗಳೂರಿನ ಆರ್ಚ್‌ಡಯಾಸಿಸ್ ಮತ್ತು ಮಹಿಳೆಯರಿಗಾಗಿ ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಜ್ಞಾಪಕ ಪತ್ರಕ್ಕೆ ಸಹಿ ಹಾಕಿದರು. ಇದನ್ನು ರಾಷ್ಟ್ರಪತಿ, ರಾಜ್ಯಪಾಲರು, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಲಾಗುತ್ತದೆ.
ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ, ದೈಹಿಕ ಮತ್ತು ಲೈಂಗಿಕವಾಗಿ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕೆಂದು ಸಹಿಹಾಕಿದ ಪ್ರತಿಭಟನಾಕಾರರು ಒತ್ತಾಯಿಸಿದರು.