ಇಂಫಾಲ: ಮೊರೆಯಲ್ಲಿ ಸಶಸ್ತ್ರ ಗುಂಪುಗಳು ಸೇನಾಪಡೆಗಳ ಮೇಲೆ ದಾಳಿ ನಡೆಸಿದ ನಂತರ, ಮೊರೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ವರದಿ ಮಾಡಿದ್ದ ಮಣಿಪುರ ಭಾಷೆಯ ಸ್ಥಳೀಯ ಪತ್ರಿಕೆಯ ಸಂಪಾದಕನನ್ನು ಶುಕ್ರವಾರ ಬಂಧಿಸಲಾಗಿದೆ. ಆತನ ವಿರುದ್ಧ ಧರ್ಮ ಹಾಗೂ ಜನಾಂಗದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ದ್ವೇಷವನ್ನು ಪ್ರಚೋದಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮೊರೆ ದಾಳಿಯ ನಂತರ ನಡೆದಿರುವ ಎರಡನೆ ಪತ್ರಕರ್ತನ ಬಂಧನ ಇದಾಗಿದೆ. ಸದರಿ ವರದಿಯನ್ನು ಕೆ.ಸರೋಜ್ ಕುಮಾರ್ ಶರ್ಮ ಹಾಗೂ ಎನ್.ಬೆನ್ಸನ್ ಸಿಂಗ್ ಎಂಬುವವರು ಮಾಡಿದ್ದರು ಎಂದು TOI ವರದಿ ಮಾಡಿದೆ.
ಇಂಫಾಲ ಮೂಲದ ‘ಹ್ಯೂಯೆನ್ ಲ್ಯಾನ್ ಪಾವೊ’ ಪತ್ರಿಕೆಯ ಧನಬೀರ್ ಮೈಬಮ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ಅಧಿಕೃತ ಗೋಪ್ಯತೆ ಕಾಯ್ದೆ, 1923ನ ವಿವಿಧ ಪರಿಚ್ಛೇದಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ.
ಇದಕ್ಕೂ ಮುನ್ನ, ಅಕ್ಟೋಬರ್ 31ರಿಂದೀಚೆಗೆ ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ಮೊರೆ ಪಟ್ಟಣದಲ್ಲಿ ಸಶಸ್ತ್ರ ಗುಂಪುಗಳು ನಡೆಸಿದ ದಾಳಿಯಲ್ಲಿ ಓರ್ವ ಸಿಡಿಪಿಒ ಅಧಿಕಾರಿ ಮೃತಪಟ್ಟು, ಒಂಬತ್ತು ಕಮಾಂಡೊಗಳು ಗಾಯಗೊಂಡ ಘಟನೆಯ ಕುರಿತು ಹ್ಯೂಯೆನ್ ಲ್ಯಾನ್ ಪಾವೊ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿತ್ತು.