ಉಡುಪಿ: ಮಣೂರು ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರ ದಲ್ಲಿ ಜರಗಿದ ಯಕ್ಷಶಿಕ್ಷಣ ಟ್ರಸ್ಟ್‌ನ ಮಣೂರು ಪರಿಸರದ ಆರು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನ ಸೋಮವಾರ ರಾತ್ರಿ ಸಮಾಪನಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರು ಮಾತನಾಡಿ, ಯಕ್ಷಶಿಕ್ಷಣ ಟ್ರಸ್ಟ್ ಸಮರ್ಪಣಾ ಭಾವದಿಂದ ಈ ಕೆಲಸವನ್ನು ಮಾಡುತ್ತಿದೆ. ಯಕ್ಷಗಾನ ಕಲಾರಂಗದ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಕಲಾಭಿಮಾನಿ, ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ ಕನ್ನಡ ಉಳಿಸುವಲ್ಲಿ ಯಕ್ಷ ಶಿಕ್ಷಣದ ಪಾತ್ರ ಮಹತ್ವದ್ದು. ಮುಂದಿನ ಬಾರಿಯೂ ಮಣೂರಿನಲ್ಲಿ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಅವಕಾಶ ಸಿಗಲಿ ಎಂದು ಆಶಿಸಿದರು.
ಸಮಾರೋಪ ಸಮಾರಂಭದಲ್ಲಿ ನಿರಂಜನ್ ನಾಯ್ಕ್, ಎಂ. ಗಂಗಾಧರ ರಾವ್, ರಾಜಗೋಪಾಲ ಆಚಾರ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಪ್ರದರ್ಶನ ನೀಡಿದ ಶಾಲೆಗಳ ತಂಡದ ವಿದ್ಯಾರ್ಥಿಗಳಿಗೆ, ಮುಖ್ಯಸ್ಥರಿಗೆ ಪ್ರಮಾಣಪತ್ರ ನೀಡಲಾಯಿತು.ಯಕ್ಷಗಾನದಲ್ಲಿ ಪಾತ್ರ ನಿರ್ವಸಿದ ಮೂವರು ವಿದ್ಯಾರ್ಥಿಗಳು ತಮ್ಮ ಯಕ್ಷಶಿಕ್ಷಣದ ಅನುಭವಗಳನ್ನು ಹಂಚಿಕೊಂಡರು.
ನಾರಾಯಣ ಎಂ. ಹೆಗಡೆ ಸ್ವಾಗತಿಸಿ, ಎಚ್.ಎನ್. ಶೃಂಗೇಶ್ವರ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆ ಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಕೊನೆಯ ದಿನದಂದು ಬೀಜಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನವೀನ್‌ಕುಮಾರ್ ಕೋಟ ನಿರ್ದೇಶನದಲ್ಲಿ ಕೃಷ್ಣ ಕೃಷ್ಣ ಶ್ರೀಕೃಷ್ಣ ಹಾಗೂ ಕೆ.ಪಿ.ಎಸ್. ಕೋಟೇಶ್ವರದ ವಿದ್ಯಾರ್ಥಿಗಳು ಸ್ಕಂದ ನಿರ್ದೇಶನದಲ್ಲಿ ಚಕ್ರವ್ಯೆಹ ಯಕ್ಷಗಾನ ಪ್ರದರ್ಶಿಸಿದರು. ಜನವರಿ 3ರಿಂದ 5ರ ತನಕ ಕುಂದಾಪುರದಲ್ಲಿ ಆರು ಪ್ರದರ್ಶನಗಳೊಂದಿಗೆ ಈ ಅಭಿಯಾನ ಸಮಾಪ್ತಿಯಾಗಲಿದೆ.