ಹೊಸದಿಲ್ಲಿ: ಕರ್ನಾಟಕ, ಕೇರಳ, ಬಂಗಾಳ ಮತ್ತು ದೆಹಲಿಯಲ್ಲಿ ತಲಾ ಒಬ್ಬರು ಕೋವಿಡ್-19 ಸೋಂಕಿತರು ಗುರುವಾರ ಮೃತಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 702 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.
ಡಿಸೆಂಬರ್ 22ರಂದು ಭಾರತದಲ್ಲಿ ಒಂದೇ ದಿನ 752 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು. ಕೇರಳದಲ್ಲಿ ಡಿಸೆಂಬರ್ 9ರಂದು ಮೊಟ್ಟಮೊದಲ ಬಾರಿಗೆ ವರದಿಯಾಗಿರುವ ಸಾರ್ಸ್-ಕೋವ್2 ತಳಿಯ ಜೆಎನ್.1 ಉಪಪ್ರಬೇಧದಿಂದ ಹೆಚ್ಚುತ್ತಿದೆ ಎಂದು ಶಂಕಿಸಲಾಗಿರುವ ಕೋವಿಡ್-19 ಪ್ರಕರಣಗಳು ಇದುವರೆಗೆ ಗುಜರಾತ್, ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ದೆಹಲಿಯಲ್ಲಿ ವರದಿಯಾಗಿವೆ.
“ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಈ ಪ್ರಕರಣಗಳ ರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳಿರುವ ಮಂದಿಗೆ ಸೋಂಕು ತಗುಲಿದಾಗ ಮಾತ್ರ ಅಂಥ ವ್ಯಕ್ತಿ ಮೃತರಾಗುವ ಪ್ರಕರಣಗಳು ವರದಿಯಾಗಿವೆ” ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.
ಕೋವಿಡ್ ಸಾಂಕ್ರಾಮಿಕವು ವ್ಯಾಪಕವಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. 2020ರ ಜನವರಿಯಲ್ಲಿ ಆರಂಭವಾದಾಗಿನಿಂದ 4.5 ಕೋಟಿ ಜನ ಇದುವರೆಗೆ ಸೋಂಕಿತರಾಗಿದ್ದು, 5.3 ಲಕ್ಷ ಸಾವುಗಳು ಸಂಭವಿಸಿವೆ. ಆರೋಗ್ಯ ಇಲಾಖೆಯ ವೆಬ್ಸೈಟ್ ಪ್ರಕಾರ ದೇಶದಲ್ಲಿ ಗುಣಮುಖರಾಗಿರುವ ದರ ಶೇಕಡ 98.8ರಷ್ಟಿದೆ. ಇದುವರೆಗೆ 220 ಕೋಟಿಗೂ ಅಧಿಕ ಕೋವಿಡ್ ಲಸಿಕೆಗಳನ್ನು ವಿತರಿಸಲಾಗಿದೆ.