ಟೆಹ್ರಾನ್: ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದ ಇಂಧನ ಬೆಲೆ ಗಗನಕ್ಕೇರಿರುವಂತೆಯೇ ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲದ ಸಾಗಣೆಯಲ್ಲಿನ ಅಡೆತಡೆಗಳಿಗೆ ಅಮೆರಿಕ ಕಾರಣ ಎಂದು ಇರಾನ್ ಹೇಳಿದೆ. ವಾಷಿಂಗ್ಟನ್ನ ‘ಅಸ್ಥಿರಗೊಳಿಸುವ ಕ್ರಮಗಳು ಈ ಸಮಸ್ಯೆಗೆ ಕಾರಣ ಎಂದಿದೆ.
ಇರಾನ್ ನ ವಿದೇಶಾಂಗ ಸಚಿವ ಸೆಯದ್ ಅಬ್ಬಾಸ್ ಅರಾಘ್ಚಿ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವೆ ಮಂಗಳವಾರ ರಾತ್ರಿ ನಡೆದ ದೂರವಾಣಿ ಸಂಭಾಷಣೆಯ ವಿವರಗಳನ್ನು ಬುಧವಾರ ಹಂಚಿಕೊಂಡಿರುವ ಇರಾನ್ನ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ.
ಮಿನಾಬ್ನಲ್ಲಿರುವ ವಿದ್ಯಾರ್ಥಿನಿಯರ ಶಾಲೆ ಮತ್ತು ನಾಗರಿಕ ವಸತಿ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ಸೇರಿದಂತೆ ಕಳೆದ 11 ದಿನಗಳಲ್ಲಿ ಇರಾನ್ ವಿರುದ್ಧ ಯುಎಸ್ ಮತ್ತು ಇಸ್ರೇಲ್ ಮಾಡಿದ ‘ಅಪರಾಧಗಳ’ ವಿವರವನ್ನು ಜೈಶಂಕರ್ ಅವರಿಗೆ ಅರಾಘಿ ಒದಗಿಸಿದ್ದಾರೆ. ಇರಾನ್ನ ಸಮಗ್ರತೆಯನ್ನು ರಕ್ಷಿಸುವ ಇರಾನ್ನ ಸಂಕಲ್ಪವನ್ನು ಅವರು ಒತ್ತಿ ಹೇಳಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್ ಗಳಿಗೆ ತಡೆಯಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಚರ್ಚಿಸಿದ್ದು, ಇಂಧನ ಸಾಗಣೆ ಅಡ್ಡಿಗೆ ಅಮೆರಿಕವೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವಾಲಯ ದೂಷಿಸಿದೆ.
ಹಾರ್ಮೂಜ್ ಮಾರ್ಗವನ್ನು ಇರಾನ್ ಬಂದ್ ಮಾಡಿದ ನಂತರ ಜಾಗತಿಕ ತೈಲ ಮತ್ತು ಅನಿಲ ಬೆಲೆ ಏರಿಕೆಯಾಗಿದೆ. ಅಮೆರಿಕದ ಅಕ್ರಮಣಕಾರಿ ಮತ್ತು ಅಸ್ಥಿರಗೊಳಿಸುವ ಕ್ರಮಗಳ ಪರಿಣಾಮವಾಗಿ ಪರ್ಷಿಯನ್ ಕೊಲ್ಲಿಯಲ್ಲಿ ಹಡಗು ಸಾಗಣೆಗೆ ಅಸುರಕ್ಷಿತ ಪರಿಸ್ಥಿತಿ ಮತ್ತು ಸಮಸ್ಯೆಗಳು ಉಂಟಾಗಿವೆ. ಅಂತಾರಾಷ್ಟ್ರೀಯ ಸಮುದಾಯ ಈ ಪರಿಸ್ಥಿತಿಗೆ ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ.
ಯುಎಸ್ ಮತ್ತು ಇಸ್ರೇಲ್ನ ಆಕ್ರಮಣಕಾರಿ ಕೃತ್ಯವು ವಿಶ್ವಸಂಸ್ಥೆಯ ನಿಯಮಗಳು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳು ಮತ್ತು ನಿಯಮಗಳ ಉಲ್ಲಂಘನೆಯಾಗಿದೆ. ಈ ಮಿಲಿಟರಿ ಆಕ್ರಮಣ ಮತ್ತು ಅಸ್ಪಷ್ಟ ಕಾನೂನು ಉಲ್ಲಂಘನೆಯನ್ನು ಖಂಡಿಸುವ ಜವಾಬ್ದಾರಿ ಎಲ್ಲಾ ರಾಷ್ಟ್ರಗಳ ಸರ್ಕಾರಗಳಿಗೆ ಇದೆ ಎಂದು ಹೇಳಿದೆ.
ಈ ಮಧ್ಯೆ ಭಾರತದ ವಿದೇಶಾಂಗ ಸಚಿವರು, ಇರಾನ್ ಮತ್ತು ನವದೆಹಲಿ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರೆಸುವ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದ್ದಾರೆ. ಈ ಪ್ರದೇಶದಲ್ಲಿ ಸ್ಥಿರತೆಯನ್ನು ಪುನರ್ ಸ್ಥಾಪಿಸಲು ಮಾತುಕತೆಯ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
