ಮರಳು ಮಾಫಿಯಾದಿಂದ ತನ್ನ ಕುಟುಂಬಕ್ಕೆ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಕೋರಿ ಎನ್‌ಆರ್‌ಐ ಒಬ್ಬರು ಮನವಿ ಮಾಡಿದ ಹಿನ್ನೆಲೆಯಲ್ಲಿ ಆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಬೆಂಗಳೂರು: ಮರಳು ಮಾಫಿಯಾದಿಂದ ತನ್ನ ಕುಟುಂಬಕ್ಕೆ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಕೋರಿ ಎನ್‌ಆರ್‌ಐ ಒಬ್ಬರು ಮನವಿ ಮಾಡಿದ ಹಿನ್ನೆಲೆಯಲ್ಲಿ ಆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಸದ್ಯ ಕೆನಡಾದಲ್ಲಿ ನೆಲೆಸಿರುವ ಮಂಜು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
“ನ್ಯಾಯಕ್ಕಾಗಿ ತುರ್ತು ಮನವಿ! ನಮ್ಮ ಕುಟುಂಬವು ಮರಳು ಮಾಫಿಯಾದಿಂದ ಹಿಂಸೆ ಎದುರಿಸುತ್ತಿದೆ. ವಯಸ್ಸಾದ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದೆ. ನಾನು ಕೆನಡಾದಲ್ಲಿದ್ದು, ಕರ್ನಾಟಕದ ಸಿಎಂ ನಮಗೆ ಸಹಾಯ ಮಾಡಬೇಕು” ಎಂದು ಮಂಜು ಅವರು ಟ್ವೀಟ್ ಮಾಡಿದ್ದರು.
ಇದನ್ನು ಓದಿ: ಅಡ್ಜಸ್ಟ್ ಮೆಂಟ್ ರಾಜಕೀಯ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಗುಡುಗು
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ಕಚೇರಿ, ”ಮಂಜು ಅವರು ಮಾಡಿರುವ ಮನವಿಯನ್ನು ಸಿಎಂ ಸಿದ್ದರಾಮಯ್ಯ ಮನ್ನಣೆಗೆ ತೆಗೆದುಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ತಕ್ಷಣವೇ ತನಿಖೆ ನಡೆಸಿ ನ್ಯಾಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ” ಎಂದು ಮರು ಟ್ವೀಟ್ ಮಾಡಲಾಗಿದೆ.
ಮಂಜು ಅವರು ತಮ್ಮ ಟ್ವೀಟ್‌ನಲ್ಲಿ ಪತ್ರವನ್ನು ಲಗತ್ತಿಸಿದ್ದು, “ಪ್ರೀತಿಯ ಸಿದ್ದರಾಮಯ್ಯ ಸರ್, ನಮ್ಮ ಮಾನ್ಯ ಸಚಿವ ಮಧು ಬಂಗಾರಪ್ಪ ಅವರ ತವರು ಕುಬಟೂರು ಬಳಿಯ ಲಕ್ಕವಳ್ಳಿ ಗ್ರಾಮದಲ್ಲಿ ನಡೆದ ನೋವಿನ ಘಟನೆಗೆ ಸಂಬಂಧಿಸಿದಂತೆ ನಿಮ್ಮ ತುರ್ತು ಸಹಾಯವನ್ನು ಕೋರಿ ನಾನು ನಿಮಗೆ ತೀವ್ರ ಕಳವಳದಿಂದ ಪತ್ರ ಬರೆಯುತ್ತಿದ್ದೇನೆ.
ಪ್ರಸ್ತುತ ನಾನು ಕೆನಡಾದಲ್ಲಿ ನೆಲೆಸಿರುವುದರಿಂದ ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿಮ್ಮ ಬೆಂಬಲ ಅಗತ್ಯ ಇದೆ. ಹಿರಿಯ ನಾಗರಿಕರನ್ನು ಒಳಗೊಂಡ ನಮ್ಮ ಕುಟುಂಬಕ್ಕೆ ಅಕ್ಕಪಕ್ಕದ ಮನೆಯವರು ಮತ್ತು ಮರಳು ಮಾಫಿಯಾ ತಂಡದಿಂದ ಅಪಾಯ ಎದುರಾಗಿದೆ. ದೈಹಿಕ ವಿಕಲಚೇತನರಾದ ನನ್ನ ತಂದೆ, ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮ್ಮ ಮನೆಯ ಸುತ್ತಮುತ್ತ ಮರಳು ಮಾಫಿಯಾ ನಿರಂತರವಾಗಿ ಅವಾಂತರ ಸೃಷ್ಟಿಸುತ್ತಿದೆ. ನೆರೆಯ ಕುಟುಂಬವು 2018ರಲ್ಲಿ ಕುಬಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಅಂದಿನಿಂದ ಅವರು ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ನನ್ನ ತಾಯಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಮಂಜು ಪತ್ರದಲ್ಲಿ ತಿಳಿಸಿದ್ದಾರೆ.