ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಡಿ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಬೆನ್ನಲ್ಲೇ ‘ಎಸ್ಐಟಿ’ ತನಿಖಾಧಿಕಾರಿಗಳ ಎದುರು ಶಾಸಕ ರೇವಣ್ಣ ಪತ್ನಿ ಭವಾನಿ ಹಾಜರಾದರು.
ಶುಕ್ರವಾರ ನ್ಯಾಯಾಲಯದ ಆದೇಶದಂತೆ ಇಲ್ಲಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಭವಾನಿ ರೇವಣ್ಣ ಆಗಮಿಸಿದ ಅವರು, ಎಸ್ಐಟಿ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲು ಮಾಡಿದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನಾ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜತೆಗೆ, ಇಂದೇ ತನಿಖಾಧಿಕಾರಿ ಮುಂದೆ ಹಾಜರಾಗಬೇಕು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಕೆ.ಆರ್.ನಗರ ತಾಲೂಕು ಹಾಗೂ ಹಾಸನ ಜಿಲ್ಲೆಗೆ ಹೋಗುವಂತಿಲ್ಲ. ತನಿಖಾಧಿಕಾರಿಗಳು ಭವಾನಿ ರೇವಣ್ಣರನ್ನು ಬಂಧಿಸಬಾರದು. ವಿಚಾರಣೆ ನೆಪದಲ್ಲಿ ಸಂಜೆ 5 ಗಂಟೆ ನಂತರ ಇರಿಸಿಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಏನಿದು ಪ್ರಕರಣ?: ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನಡೆಸಿರುವ ಫೋನ್ ಸಂಭಾಷಣೆಯಲ್ಲಿ ಭವಾನಿ ರೇವಣ್ಣ ಅವರ ಪಾತ್ರದ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಎಸ್ಐಟಿ ಗೆ ಲಭ್ಯವಾಗಿದೆ. ಆದ್ದರಿಂದ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನು ವಿಚಾರಣೆಗೊಳಪಡಿಸಲು ಸತತ ಎರಡು ಬಾರಿ ಎಸ್ಐಟಿ ನೋಟಿಸ್ ನೀಡಿತ್ತು.
ಭವಾನಿ ರೇವಣ್ಣ ಕಾರು ಚಾಲಕನ ಬಂಧನ
ಮೈಸೂರು ಜಿಲ್ಲೆ ಕೆಆರ್ ನಗರ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ ಎಂಬಾತನನ್ನು ಎಸ್ಐಟಿ ಬಂಧಿಸಿದೆ.
ಬುಧವಾರ ರಾತ್ರಿಯೇ ಚಿಕ್ಕಮಗಳೂರಿನಲ್ಲಿ ಅಜಿತ್ನನ್ನು ಎಸ್ಐಟಿ ಬಂಧಿಸಿತ್ತು. ಚಾಲಕ ಅಜಿತ್ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿದ್ದ ಕುರಿತು ಮಾಹಿತಿ ಆಧರಿಸಿ ಚಿಕ್ಕಮಗಳೂರಿನಲ್ಲಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿ ಬಂಧಿಸಿದೆ. ಸಂತ್ರಸ್ತೆಯ ವಿಡಿಯೊ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪ ಹಾಗೂ ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದ ಆರೋಪ ಕೂಡ ಇದೆ ಅಜಿತ್ ಮೇಲಿದೆ.