ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ ಪಾಟೀಲ್, ಈ ಹಿಂದೆ ಶಿವರಾಂ ಹೆಬ್ಬಾರ್ ವಿರುದ್ಧ ಗೆಲುವು ಸಾಧಿಸಿದ್ದರು. ವಿ.ಎಸ್ .ಪಾಟೀಲ್ರನ್ನು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ (RV Deshpande) ಪಕ್ಷಕ್ಕೆ ಕರೆತಂದಿದ್ದಾರೆ. ರಾಜಧಾನಿ ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ಮಾಜಿ ಶಾಸಕ V.S.ಪಾಟೀಲ್ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರೇನೋ ತಮ್ಮ ಭಾಗದ ಪ್ರಭಾವೀ ನಾಯಕ V.S.ಪಾಟೀಲರನ್ನು ಪಕ್ಷಕ್ಕೆ ಕರೆತಂದರೇನೋ ನಿಜ. ಆದರೆ ಪಕ್ಷ ಸೇರ್ಪಡೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎದುರು ಸ್ವಲ್ಪ ಮುಜುಗರಕ್ಕೀಡಾದರು! ಪಕ್ಷಕ್ಕೆ ಬರ ಮಾಡಿಕೊಳ್ಳುವ ಸಲುವಾಗಿ ವಿಎಸ್ ಪಾಟೀಲರ ರಾಜಕೀಯ ಜೀವನದ ಬಗ್ಗೆ ಹೇಳುತ್ತಿದ್ದ ಡಿಕೆ ಶಿವಕುಮಾರ್ ಅವರು ಹಳಿಯಾಳದಿಂದ (Haliyal) ವಿ ಎಸ್ ಪಾಟೀಲ್ 2004 ರಲ್ಲಿ ಸ್ಪರ್ಧೆ ಮಾಡಿದ್ದರು ಎಂದರು. ಆಗ ಪಕ್ಕದಲ್ಲಿದ್ದ ದೇಶಪಾಂಡೆ ಅವರು ಹಳಿಯಾಳ ಅಲ್ಲ, ಹಳಿಯಾಳ ಅಲ್ಲ ಎಂದು ಎರಡೆರಡು ಬಾರಿ ಡಿಕೆ ಶಿವಕುಮಾರ್ ಅವರನ್ನು ತಡೆದರು. ಇಲ್ಲ ಹಳಿಯಾಳದಿಂದ ಸ್ಪರ್ಧೆ ಅಂತಾನೇ ಡಿಕೆ ಶಿವಕುಮಾರ್ ಪುನರುಚ್ಚರಿಸಿದರು.
ಅದಕ್ಕೆ ಪ್ರತಿಯಾಗಿ ದೇಶಪಾಂಡೆ ಅವರೂ ಇಲ್ಲವೇ ಇಲ್ಲ. ಅವರದ್ದು ಹಳಿಯಾಳ ಅಲ್ಲ ಎಂದು ಮತ್ತೆ ಅಡ್ಡಿಪಡಿಸಿದರು. ಕೊನೆಗೆ, ಹೌದು ಹಳಿಯಾಳದಿಂದ ಒಮ್ಮೆ ಸ್ಪರ್ಧೆ ಮಾಡಿದ್ದೆ ಎಂದು ಸ್ವತಃ ವಿಎಸ್ ಪಾಟೀಲ್ ಅವರೇ ಸ್ಪಷ್ಟಪಡಿಸಿದರು. ಈ ಮಧ್ಯೆ, ಹಳಿಯಾಳ ಅಂತ ಹೇಳಿದೆ ಅಷ್ಟೇ, ಗೆದ್ದಿದ್ದಾರೆ ಎಂದಿಲ್ಲ! ಎಂದು ಡಿಕೆ ಶಿವಕುಮಾರ್ ನಗೆಯಾಡಿದರು. ಕೊನೆಗೆ 75 ವರ್ಷ ವಯಸ್ಸಿನ ಹಿರಿಯ ನಾಯಕ ದೇಶಪಾಂಡೆ ಅವರೂ ಸಹ ನಗುನಗುತಲೇ ಓಹೋ 9 ಚುನಾವಣೆ ಆಯ್ತು ನಂದು, ಯಾರು ಯಾವಾಗ ಅಂತೆಲ್ಲ ಮರೆತುಹೋಗಿದೆ ಎಂದು ಸಮಜಾಯಿಷಿ ಕೊಟ್ಟರು! ಅಂದಹಾಗೆ ದೇಶಪಾಂಡೆ ಅವರು ತಮ್ಮ ಹುಟ್ಟೂರಾದ ಹಳಿಯಾಳ ಅಸೆಂಬ್ಲಿ ಕ್ಷೇತ್ರವನ್ನು ಕಾಂಗ್ರೆಸ್ ವತಿಯಿಂದ ಪ್ರತಿನಿಧಿಸಿದ್ದಾರೆ.
ಜಂಟಿ- ಒಂಟಿ ಬಸ್ ಯಾತ್ರೆಯ ಗೊಂದಲಕ್ಕೆ ತೆರೆ ಎಳೆದ ಡಿಕೆಶಿವಕುಮಾರ್:
ಕರ್ನಾಟಕ ಅಸೆಂಬ್ಲಿ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿರುವ ಜಂಟಿ ಹಾಗೂ ಒಂಟಿ ಬಸ್ ಯಾತ್ರೆಗಳ ಗೊಂದಲಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ವತಃ ತಾವೇ ತೆರೆ ಎಳೆದರು. ಬಸ್ ಯಾತ್ರೆಯ ಗೊಂದಲಗಳಿಗೆ ತಾವೇ ತೆರೆ ಎಳೆದ ಡಿಕೆಶಿವಕುಮಾರ್ ಮೊದಲು ಒಟ್ಟಾಗಿ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಮಾಡ್ತೇವೆ. 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಬಳಿಕ ಪ್ರತ್ಯೇಕವಾಗಿಯೂ ಯಾತ್ರೆ ಹೋಗ್ತೇವೆ. ಜಂಟಿ ಯಾತ್ರೆ ಮುಗಿದ ಬಳಿಕ ನಾನು ದಕ್ಷಿಣ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಯಾತ್ರೆ ಹೋಗ್ತೇನೆ.
ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ನವರು ಯಾತ್ರೆ ಮಾಡ್ತಾರೆ. ಆ ಮೇಲೆ ನಾನು ಉತ್ತರ ಕರ್ನಾಟಕ ಭಾಗಕ್ಕೆ ಯಾತ್ರೆ ಹೋಗ್ತೇನೆ. ಸಿದ್ದರಾಮಯ್ಯ ನವರು ಉತ್ತರ ಕರ್ನಾಟಕ ಮುಗಿಸಿ ದಕ್ಷಿಣ ಕರ್ನಾಟಕ ಭಾಗಕ್ಕೆ ಯಾತ್ರೆ ಬರ್ತಾರೆ. ಎಲ್ಲ 224 ಕ್ಷೇತ್ರಗಳನ್ನೂ ನಾವು ತಲುಪಬೇಕಿದೆ. ಹೀಗಾಗಿ ಜನವರಿಯಲ್ಲಿ ಒಟ್ಟಾಗಿ ಯಾತ್ರೆ ಮಾಡಿ, ಬಳಿಕ ಪ್ರತ್ಯೇಕ ಯಾತ್ರೆ ಮಾಡ್ತೇವೆ ಎಂದು ಬಸ್ ಯಾತ್ರೆಯ ವಿವರ ನೀಡುತ್ತಾ, ಎಲ್ಲ ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟರು ಡಿಕೆ ಶಿವಕುಮಾರ್.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ