ನ್ಯೂಯಾರ್ಕ್: ಮಾಡದ ತಪ್ಪಿಗೆ 44 ವರ್ಷ ಜೈಲಿನಲ್ಲಿ ಬಂಧಿಯಾಗಿದ್ದ ವ್ಯಕ್ತಿಗೆ 25 ದಶಲಕ್ಷ ಡಾಲರ್ ಪರಿಹಾರ ನೀಡುವಂತೆ ಅಮೆರಿಕದ ನಾರ್ಥ್ ಕರೊಲಿನಾದ ನ್ಯಾಯಾಲಯ ಆದೇಶಿಸಿದೆ.
1976ರಲ್ಲಿ ಶ್ವೇತವರ್ಣೀಯ ಮಹಿಳೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು ದರೋಡೆ ಪ್ರಕರಣದಲ್ಲಿ ಕಪ್ಪು ವರ್ಣೀಯ ರೋನಿ ವ್ಯಾಲೇಸ್ ಲಾಂಗ್ ಅಪರಾಧಿಯೆಂದು ನಿರ್ಧರಿಸಿ ಎರಡು ಜೀವಾವಧಿ ಜೈಲುಶಿಕ್ಷೆ ವಿಧಿಸಲಾಗಿತ್ತು. ತಾನು ನಿರ್ದೋಷಿಯೆಂದು ಲಾಂಗ್ ಹೇಳಿದರೂ ನ್ಯಾಯಾಧೀಶರು ಆತನ ಹೇಳಿಕೆಯನ್ನು ಮಾನ್ಯ ಮಾಡಲಿಲ್ಲ.
ಅಂತಿಮವಾಗಿ 2020ರ ಆಗಸ್ಟ್ ನಲ್ಲಿ ಫೆಡರಲ್ ಮೇಲ್ಮನವಿ ನ್ಯಾಯಾಲಯದ ಆದೇಶದಂತೆ ನಡೆದ ಮರು ತನಿಖೆಯಲ್ಲಿ ಲಾಂಗ್ ನಿರ್ದೋಷಿಯೆಂದು ಸಾಬೀತಾಗಿ ಬಿಡುಗಡೆಗೆ ನ್ಯಾಯಾಲಯ ಸೂಚಿಸಿತು. ಆದರೆ ಅನ್ಯಾಯವಾಗಿ ಜೈಲುಶಿಕ್ಷೆ ಅನುಭವಿಸಿರುವುದನ್ನು ಪ್ರಶ್ನಿಸಿ ಲಾಂಗ್ 2021ರಲ್ಲಿ ಕೋರ್ಟ್‍ನ ಮೊರೆ ಹೋದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಲಾಂಗ್‍ಗೆ 25 ದಶಲಕ್ಷ ಡಾಲರ್ ಪರಿಹಾರ ನೀಡುವಂತೆ, ಇದರಲ್ಲಿ 22 ದಶಲಕ್ಷ ಡಾಲರ್ ಹಣವನ್ನು ಸ್ಥಳೀಯ ಸರಕಾರ ಕ್ಷಮಾಪಣೆ ಪತ್ರದ ಸಹಿತ ನೀಡಬೇಕು ಎಂದು ಆದೇಶಿಸಿದೆ.