ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವತಿಯಿಂದ ಪ್ರಾರಂಭಗೊಂಡ ಸಮುದಾಯ ಬಾನುಲಿ ‘ರೇಡಿಯೋ ಕುಂದಾಪ್ರ-89.6 ಎಫ್.ಎಂ.’ನ ನಿರಂತರ ಪ್ರಸಾರ ಮಾರ್ಚ್ 13ರಿಂದ ಪ್ರಾರಂಭಗೊಳ್ಳಲಿದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು ಕಾಲೇಜಿನಲ್ಲಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ರೇಡಿಯೊ ಕುಂದ್ರಾಪದ ಬಗ್ಗೆ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ, ಮಾ.13ರ ಬೆಳಗ್ಗೆ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯ ದರ್ಶಿ ಬಿ.ವರದರಾಯ ಪೈ ಮುಖ್ಯ ಅತಿಥಿ ಯಾಗಿ ಪಾಲ್ಗೊಳ್ಳಲಿದ್ದು, ಕಾಲೇಜಿನ ಹಿರಿಯ ವಿಶ್ವಸ್ಥ ಕೆ. ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ರೇಡಿಯೋ ಕುಂದಾಪ್ರ ಇದು ಲಾಭರಹಿತ ಸಮುದಾಯ ಬಾನುಲಿ ಕೇಂದ್ರವಾಗಿದ್ದು, ಸ್ಥಳೀಯ ಜನರ ಜೀವನದ ಪ್ರಗತಿ ಸುಧಾರಿಸುವ ಗುರಿಯನ್ನು ಹೊಂದಿದೆ. ಕೃಷಿ, ಮೀನುಗಾರಿಕೆ, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಶೇಷ ಕಾರ್ಯಕ್ರಮಗಳ ಪ್ರಸಾರ ಇದರ ಧ್ಯೇಯೋದ್ದೇಶವಾಗಿದೆ. ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ ವಿಷಯಗಳ ಕುರಿತು ಸ್ಥಳೀಯರ ಅನುಭವಗಳನ್ನು ಮತ್ತು ಅವರ ವಿಚಾರ ಗಳನ್ನು ಹಂಚಿಕೊಳ್ಳಲು ಚರ್ಚಿಸಲು ಸಮುದಾಯದ ಸದಸ್ಯರಿಗೆ ಇದೊಂದು ವೇದಿಕೆಯಾಗಿದೆ ಎಂದರು.
ಇದರಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳ ಭಾಗವಹಿಸುವಿಕೆ ವಿಶೇಷವಾಗಿದೆ. ಉತ್ಸಾಹಿ ವಿದ್ಯಾರ್ಥಿಗಳು ಬಹಳಷ್ಟು ರೇಡಿಯೋ ಕಾರ್ಯಕ್ರಮಗಳ ಜೊತೆಗೆ ಸುಂದರ ಶೀರ್ಷಿಕೆ ಗೀತೆ ಒದಗಿಸಿದ್ದಾರೆ. ವಾರಕ್ಕೊಮ್ಮೆ ಪ್ರಸಾರಗೊಳ್ಳುವ ರೇಡಿಯೋ ನಾಟಕಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಯು.ಎಸ್ ಶೆಣೈ ಮಾತನಾಡಿ, ರೇಡಿಯೋ ಕುಂದಾಪುರ 89.6 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ ಸ್ಥಳೀಯ ಕನ್ನಡ ಭಾಷೆಯಲ್ಲಿಯೇ ಹೆಚ್ಚು ಪ್ರಸಾರವಾಗುವುದರಿಂದ ಜನರನ್ನು ಅದು ಸುಲಭವಾಗಿ ತಲುಪುತ್ತದೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ತಮ ಸಂವಹನ ಮಾಧ್ಯಮವಾಗಿದೆ. ಗ್ರಾಮೀಣ ಭಾಗದ ಜನರ ಸಮಸ್ಯೆ, ಸವಾಲುಗಳು ಮತ್ತು ಅಗತ್ಯತೆಗಳನ್ನು ರೇಡಿಯೋ ಕುಂದಾಪ್ರ ಮೂಲಕ ಸುಲಭವಾಗಿ ಹಂಚಿಕೊಳ್ಳಬಹುದು ಎಂದರು.
ರೇಡಿಯೋ ಕುಂದಾಪ್ರ ಕಾರ್ಯಕ್ರಮಗಳಲ್ಲಿ ಕೃಷಿ ಸಮಾಚಾರ, ಕಡಲ ಒಡಲು, ಯುವ ಸ್ಪಂದನ, ಕೇಳೇ ಸಖಿ, ಅತಿಥಿ ಯೊಂದಿಗೆ ಜ್ಯೋತಿ ಮುಂತಾದ ವಿಭಾಗಗಳು ಇರುತ್ತವೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ ಗೊಂಡ ಮಾತನಾಡಿ, ಈಗಾಗಲೇ ರೇಡಿಯೋದ ಪ್ರಾಯೋಗಿಕ ಪ್ರಸಾರ ನಡೆಯುತಿದ್ದು, ಮೂರು ತಿಂಗಳ ಕಾಲ ತಾಂತ್ರಿಕ ವಿಚಾರಗಳನ್ನು ಪರಿಶೀಲಿಸಲಾಗಿದೆ. ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಡಾ.ಉಮೇಶ್ ಪುತ್ರನ್, ರಘು ಪಾಂಡೇಶ್ವರ್, ನರೇಂದ್ರಕುಮಾರ ಕೋಟ, ಚನ್ನ ಪೂಜಾರಿ, ಸತೀಶ್ ವಡ್ಡರ್ಸೆ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಅವು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ 89.6 ಎಫ್.ಎಂ. ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.
