ಮುಂಗಾರು ಪ್ರವೇಶ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.38ರಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು: ಮುಂಗಾರು ಪ್ರವೇಶ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.38ರಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕೆಲವು ಕಡೆ ಕಡಿಮೆ ಮಳೆಯಾಗಿದ್ದರೆ, ಮತ್ತೆ ಕೆಲವು ಕಡೆ ವರುಣನ ಸುಳಿವೇ ಇಲ್ಲದಂತಾಗಿದೆ. ಹೀಗಾಗಿ ಅನೇಕ ಡ್ಯಾಂಗಳು ಬರಿದಾಗಿದ್ದು ರಾಜ್ಯಕ್ಕೆ ನೀರಿನ ಕೊರತೆ ಸೃಷ್ಟಿಯಾಗಿದೆ ಎಂದು ವರದಿಗಳು ತಿಳಿವೆ.
ಕೆಆರ್‌ಎಸ್, ಕಬಿನಿ ಮತ್ತು ಹಾರಂಗಿ ಅಣೆಕಟ್ಟುಗಳನ್ನು ತುಂಬಲು ಪ್ರಮುಖ ಮೂಲಗಳಾಗಿರುವ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆ ಕೊರತೆಯುಂಟಾಗಿದದೆ ಎಂದು ತಿಳಿದುಬಂದಿದೆ.
ಈ ನಡವೆ ಮುಂದಿನ 5 ದಿನಗಳವರೆಗೆ ಮಳೆಯಾಗಲಿದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದು, ಕೆಲವು ಜಿಲ್ಲೆಗಳಲ್ಲಿ ರೆಡ್ ಹಾಗೂ ಆರೆಂಜ್ ಅಲರ್ಟ್ ಗಳನ್ನು ಘೋಷಣೆ ಮಾಡಲಾಗಿದೆ.
ಈ ಬಾರಿ ಕೊಡಗಿನಲ್ಲಿ ಶೇ.78ರಷ್ಟು ಮಳೆ ಕೊರತೆ ಕಂಡುಬಂದರೆ, ಚಿಕ್ಕಮಗಳೂರಿನಲ್ಲಿ ಶೇ.60ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿ ಲಿಂಗನಮಕ್ಕಿಯ ಪ್ರಮುಖ ನೀರಿನ ಮೂಲಗಳಲ್ಲೊಂದಾದ ಶಿವಮೊಗ್ಗದಲ್ಲಿ ಶೇ.66, ಕರಾವಳಿ ಕರ್ನಾಟಕದಲ್ಲಿ ಶೇ.31, ಉತ್ತರ ಒಳನಾಡಿನಲ್ಲಿ ಶೇ.38 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.46ರಷ್ಟು ಮಳೆ ಕೊರತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ 1 ರಿಂದ ಬೀದರ್, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಮಂಡ್ಯ ಮತ್ತು ಮೈಸೂರು ಮುಂತಾದ ಒಂಬತ್ತು ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ.