ಮೈಸೂರು: ನನ್ನ ಕ್ಷೇತ್ರದ ಜನರು ಪ್ರೀತಿಯಿಂದ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕೇಳುತ್ತಿದ್ದಾರೆ. ನಾನು ಮುಂದಿನ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಇದೇ ನನ್ನ ಕೊನೆ ಚುನಾವಣೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ನಗರದ ತಮ್ಮ ನಿವಾಸ ರಾಮಕೃಷ್ಣನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ನನ್ನ ಕೊನೆ ಚುನಾವಣೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವರ್ಷ ವಯಸ್ಸಾಗಿ ಬಿಡುತ್ತದೆ. 83 ವರ್ಷ ಆದ ಮೇಲೆ ಇಷ್ಟೊಂದು ಉತ್ಸಾಹದಿಂದ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಆದ್ದರಿಂದ ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದರು.
ನನ್ನ ಕ್ಷೇತ್ರದ ಜನರು ಚುನಾವಣೆಗೆ ಸ್ಫರ್ಧೆ ಮಾಡಿ ಎಂದು ಪ್ರೀತಿಯಿಂದ ಹೇಳುತ್ತಿದ್ದಾರೆ. ಆದರೆ ನನಗೆ ಚುನಾವಣಾ ರಾಜಕೀಯ ಆಗುವುದಿಲ್ಲ. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.