Home Uncategorized ಮುಸ್ಲಿಂ ಮಹಿಳೆಯರ ಅವಹೇಳನ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ದಸಂಸ ಆಗ್ರಹ

ಮುಸ್ಲಿಂ ಮಹಿಳೆಯರ ಅವಹೇಳನ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ದಸಂಸ ಆಗ್ರಹ

25
0

ಮಂಡ್ಯ: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದ ಸಮಿತಿಯ ಕಾರ್ಯಕರ್ತರು, ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಸಂಕೀರ್ತನಾ ಯಾತ್ರೆ ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡನಿದ್ದ. ಅವರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದು ಮೋದಿ ಸರಕಾರ’ ಎಂದು ಹೇಳುವ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಾರ್ವಜನಿಕವಾಗಿ ಮಹಿಳೆಯರನ್ನು ಅವಮಾನಿಸಿ, ಧಾರ್ಮಿಕವಾಗಿ ನಿಂದಿಸಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವಂತಹ, ಕೋಮುಗಲಭೆಗೆ ಪ್ರಚೋದನೆ ನೀಡುವ ದ್ವೇಷ ಭಾಷಣ ಮಾಡಿರುವ ಭಟ್ ವರ್ತನೆಯಿಂದ ಅಶಾಂತಿ ವಾತಾವರಣ ಸೃಷ್ಟಿಯಾಗಿ, ಜೀವ ಹಾನಿಯೂ ಸಂಭವಿಸಬಹುದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸಮಿತಿ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರಕಾರಿ ಅಂಗೀಕರಿಸಿ, ಜಾರಿಗೊಳಿಸಬೇಕೆಂದೂ ಅವರು ಆಗ್ರಹಿಸಿದರು.

ಸಮಿತಿಯ ಮುಖಂಡರಾದ ಶಿವರಾಜ್ ಮರಳಿಗ, ಮದ್ದೂರು ಶ್ರೀನಿವಾಸ್, ಶಂಕರ್ ನಿಡಘಟ್ಟ, ಸವಿತಾ ಶಿವಪುರ, ಪ್ರಕಾಶ್ ನಿಡಘಟ್ಟ, ತಿಮ್ಮೇಶ್ ಅಬಲವಾಡಿ, ದೇವರಾಜ್ ನರಹಳ್ಳಿ, ಎಂ.ಡಿ.ಸುರೇಶ್, ಪುಟ್ಟಲಿಂಗಯ್ಯ, ಆನಂದ.ಎಸ್., ಹನುಮಂತಯ್ಯ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here