ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ತಾಯಿ-ಮಗು ಸಾವನ್ನಪ್ಪಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಎಂಆರ್ಸಿಎಲ್ನ ಮುಖ್ಯ ಇಂಜಿನಿಯರ್ನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ತಾಯಿ-ಮಗು ಸಾವನ್ನಪ್ಪಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಎಂಆರ್ಸಿಎಲ್ನ ಮುಖ್ಯ ಇಂಜಿನಿಯರ್ನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮೆಟ್ರೊ ಎಂಡಿ, ಬೆಂಗಳೂರು ನಗರ ಪೊಲಿಸ್ ಆಯುಕ್ತ ಹಾಗೂ ಡಿಸಿಪಿ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಿದರು. ಸಭೆಯಲ್ಲಿ ಬಿಎಂಆರ್ಸಿಎಲ್ನ ಮುಖ್ಯ ಇಂಜಿನಿಯರ್ನ್ನು ಅಮಾನತು ಮಾಡುವಂತೆ ಸಿಎಂ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಎನ್ಸಿಸಿ ಕಂಪನಿ ಮುಖ್ಯಸ್ಥರ ವಿರುದ್ಧ, ಮೆಟ್ರೋ ಕಂಟ್ರ್ಯಾಕ್ಟರ್, ಇಂಜಿನಿಯರ್ಗಳ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಭೆ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಇಂಥ ಘಟನೆ ಮತ್ತೆ ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ತನಿಖೆ ಯಾವ ರೀತಿ ನಡೆಸಬೇಕೆಂದು ನಾಳೆ ತೀರ್ಮಾನಿಸುತ್ತೇವೆ. ಮೃತರ ಕುಟುಂಬಕ್ಕೆ ಮೆಟ್ರೋ ಕಡೆಯಿಂದ, ನಮ್ಮ ಕಡೆಯಿಂದ ಪರಿಹಾರ ನೀಡಿದ್ದೇವೆ. ಆದರೆ ಪರಿಹಾರ ನೀಡುವುದು ಮುಖ್ಯವಲ್ಲ. ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣ: ಐವರ ವಿರುದ್ಧ ಎಫ್ಐಆರ್ ದಾಖಲು
ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದ ಪರಿಣಾಮ 35 ವರ್ಷದ ತೇಜಸ್ವಿನಿ ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಅದೃಷ್ಟವಶಾತ್ ತೇಜಸ್ವಿನಿ ಪತಿ ಹಾಗೂ ಮಗಳು ಪ್ರಾಣಪಾಯದಿಂದ ಪಾರಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಮೆಟ್ರೋ ನಿರ್ಮಾಣದಲ್ಲಿ ಸಾಧ್ಯವಾದಷ್ಟು ಅತ್ಯಂತ ಹೆಚ್ಚಿನ ಗುಣಮಟ್ಟವನ್ನು ಅನುಸರಿಸುತ್ತಿದ್ದೇವೆ. ಘಟನೆ ಸಂಬಂಧ ವಿಸ್ತೃತವಾಗಿ ತನಿಖೆ ನಡೆಸಲಾಗುವುದು, ಒಂದು ವೇಳೆ ತಾಂತ್ರಿಕ ದೋಷ ಅಥವಾ ಕಾರ್ಮಿಕರ ತಪ್ಪಿನಿಂದಾದ ಅವಘಡ ಎಂದು ಕಂಡುಬಂದಲ್ಲಿ ಮುಂದೆ ಇಂತಹ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನಾಗವಾರದ ಬಳಿ ನಡೆದಿರುವ ಮೆಟ್ರೋ ಪಿಲ್ಲರ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದ್ದು, ತಪ್ಪಿತಸ್ಥ ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
1/2 pic.twitter.com/QLpxT2RyoN
— Basavaraj S Bommai (@BSBommai) January 10, 2023