ಮೇ 31ರಿಂದ ರಾಜ್ಯದ 23-24 ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಾರಂಭವಾಗುತ್ತಿದ್ದು, ಮೊದಲ ದಿನ ಶಾಲೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಬೆಂಗಳೂರು: ಮೇ 31ರಿಂದ ರಾಜ್ಯದ 23-24 ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಾರಂಭವಾಗುತ್ತಿದ್ದು, ಮೊದಲ ದಿನ ಶಾಲೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಶಾಲಾ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಮಧು ಬಂಗಾರಪ್ಪ ಅವರು ಶುಭ ಹಾರೈಸಿದ್ದಾರೆ.
ಶಾಲೆಯಲ್ಲಿ ಪೂರಕ ಸಿದ್ಧತೆಗಳು ಇಂದಿನಿಂದಲೇ ಆರಂಭಗೊಂಡಿವೆ. ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ. ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ, ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ ಎಂದು ಹೇಳಿದ್ದಾರೆ.
ಈ ನಡುವೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಸುತ್ತೋಲೆಯಲ್ಲಿ ಎಲ್ಲಾ ಮಕ್ಕಳಿಗೆ ಶಾಲೆಯ ಮೊದಲ ದಿನ ಕಡ್ಡಾಯವಾಗಿ ಸಿಹಿತಿಂಡಿಗಳನ್ನು ನೀಡಬೇಕು ಮತ್ತು ಮೊದಲ ದಿನದಿಂದಲೇ ಪ್ರತಿದಿನ ಮಧ್ಯಾಹ್ನದ ಊಟವನ್ನು ನೀಡಬೇಕು ಎಂದು ತಿಳಿಸಿದೆ.
ಬೇಸಿಕೆ ರಜೆ ಬಳಿಕ ಶಾಲೆಗಳು ಪುನರಾರಂಭವಾಗುತ್ತಿರು ಹಿನ್ನೆಲೆಯಲ್ಲಿ ಮೇ.29 ಮತ್ತು 30 ರಂದು ಶಾಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳನ್ನು ನಡೆಸಬೇಕು. ಇತರೆ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.
ಬಳಕೆಯಾಗದ ವಸ್ತುಗಳ ವಿಲೇವಾರಿ ಸೇರಿದಂತೆ ಶಾಲಾ ಆವರಣವನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸುವಂತೆ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿಯಾಗಿ ರೂಪಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದೆ.
2023-24ನೇ ಸಾಲಿನ ಶೈಕ್ಷಣಿಕ ವರ್ಷದ ದಿನಗಳ ಸಂಖ್ಯೆಯನ್ನು 26 ದಿನಗಳು ಕಡಿತಗೊಳಿಸಿದ್ದು, ಒಟ್ಟು 244 ದಿನಗಳು ಮಾತ್ರ ಶಾಲೆಗಳು ತೆರೆದಿರುತ್ತವೆ. ಅದರಲ್ಲಿ 180 ದಿನಗಳು ಮಾತ್ರ ಬೋಧನಾ ದಿನಗಳು ಇರಲಿವೆ. ದಸರಾ ರಜೆ ಕೂಡ ಅಕ್ಟೋಬರ್ 8 ರಿಂದ 24ರವರೆಗೆ ಇರಲಿದೆ ಎನ್ನಲಾಗಿದೆ.