Home Uncategorized ಮೈಸೂರು | ರೈಲಿನಲ್ಲಿ ಅಸಭ್ಯ ವರ್ತನೆ ಪ್ರಶ್ನಿಸಿದ್ದಕ್ಕೆ ಕಾನ್ ಸ್ಟೇಬಲ್ ಗೆ ಚಾಕು ಇರಿತ: ನಾಲ್ವರ...

ಮೈಸೂರು | ರೈಲಿನಲ್ಲಿ ಅಸಭ್ಯ ವರ್ತನೆ ಪ್ರಶ್ನಿಸಿದ್ದಕ್ಕೆ ಕಾನ್ ಸ್ಟೇಬಲ್ ಗೆ ಚಾಕು ಇರಿತ: ನಾಲ್ವರ ಬಂಧನ

37
0

ಮೈಸೂರು: ರೈಲು ಪ್ರಯಾಣದ ವೇಳೆ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿದ ಪೊಲೀಸ್‌ ಕಾನ್ ಸ್ಟೇಬಲ್ ಗೆ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ.

ಚಾಕುವಿನಿಂದ ಇರಿದಿದ್ದ 6 ಮಂದಿ ದುಷ್ಕರ್ಮಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಬೆಂಗಳೂರು ಮೂಲದ ದರ್ಶನ್‌ (21), ಮುಹಮ್ಮದ್ ಇಮ್ರಾನ್(20), ಮೊಯಿನ್ ಪಾಷ(21), ಫೈಸಲ್‌ ಖಾನ್‌ (22) ಮಂಜು(24) ಎಂದು ಗುರುತಿಸಲಾಗಿದೆ.

ಮಂಗಳವಾರ ಮೈಸೂರಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ ಗೋಲ್‌ ಗುಂಬಝ್ ಎಕ್ಸ್‌ಪ್ರೆಸ್ ರೈಲಿನ ಎಸ್-5  ಬೋಗಿಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್ ಸತೀಶ್‌ಚಂದ್ರ ಅವರೇ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾದವರು. ದುಷ್ಕರ್ಮಿಗಳು, ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಗಾಯಗೊಂಡು ರಕ್ತಸುರಿಯುತ್ತಿದ್ದರೂ ಇಬ್ಬರನ್ನು ಹಿಡಿಯುವಲ್ಲಿ ಸತೀಶ್‌ಚಂದ್ರ ಯಶಸ್ವಿಯಾಗಿದ್ದರು. ನಂತರ 24 ಗಂಟೆಯೊಳಗೆ ರೈಲ್ವೇ ಪೊಲೀಸರು ಪರಾರಿಯಾಗಿದ್ದ ಇತರ ನಾಲ್ವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ರೈಲಿನ ಎಸ್-5 ಬೋಗಿಯ ಶೌಚಾಲಯದ ಬಳಿ ನಿಂತು 6 ಮಂದಿ ಯುವಕರು ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ. ಇವರಲ್ಲಿ ಇಬ್ಬರು ಫುಟ್‌ಬೋರ್ಡ್ ಮೇಲೆ ನಿಂತು ಧೂಮಪಾನ ಮಾಡುತ್ತಿರುವುದು, ಉಳಿದವರು ಪ್ರಯಾಣಿಕರ ಚಲನ-ವಲನಗಳ ಗಮನಿಸುತ್ತಿರುವುದನ್ನು ಸತೀಶ್‌ಚಂದ್ರ ಅವರು ನೋಡಿದ್ದಾರೆ.

ಇವರಲ್ಲಿ ಇಬ್ಬರು ಶೌಚಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರಿಂದ ಅವರ ಬಳಿ ಹೋಗಿ, ನಾನು ಕಾನ್‌ಸ್ಟೇಬಲ್ ಸತೀಶ್‌ಚಂದ್ರ ಎಂದು ಪರಿಚಯಿಸಿಕೊಂಡು ಸಹ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ. ಆ ವೇಳೆ ಯುವಕರು ಅವರೊಂದಿಗೆ ವಾಗ್ವಾದಕ್ಕಿಳಿದು, ಮಾತಿನ ಚಕಮಕಿ ನಡೆಸಿ ಕೊನೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸತೊಡಗಿದಾಗ ಪ್ರಯಾಣಿಕರು ಸತೀಶ್‌ಚಂದ್ರ ಪರ ನಿಂತಿದ್ದಾರೆ. ಆ ವೇಳೆಗಾಗಲೇ ರೈಲು ಮದ್ದೂರು ತಲುಪುತ್ತಿದ್ದಂತೆ ಪರಿಸ್ಥಿತಿ ಕೈಮೀರುತ್ತಿದ್ದರಿಂದ ಮದ್ದೂರು ರೈಲ್ವೇ ಪೊಲೀಸರಿಗೆ ವಿಷಯ ಮುಟ್ಟಿಸಿದರು.

ಎಚ್ಚೆತ್ತ ಖದೀಮರು ಪರಾರಿಯಾಗಲು ಯತ್ನಿಸಿದರು. ಆ ಪೈಕಿ ಓರ್ವ ತನ್ನ ಬಳಿ ಇದ್ದ ಚಾಕುವಿನಿಂದ ಸತೀಶ್‌ಚಂದ್ರ ಅವರ ಬೆನ್ನಿನ ಭಾಗಕ್ಕೆ ಇರಿದು ಓಡಿ ಹೋಗಲು ಯತ್ನಿಸಿದ್ದಾನೆ, ಗಾಯಗೊಂಡು ರಕ್ತ ಸುರಿಯುತ್ತಿದ್ದರೂ ಪ್ರಯಾಣಿಕರ ಸಹಾಯದಿಂದ ಇಬ್ಬರನ್ನು ಹಿಡಿದು ಮದ್ದೂರು ರೈಲ್ವೇ ಪೊಲೀಸರಿಗೆ ಒಪ್ಪಿಸುವಲ್ಲಿ ಸತೀಶ್‌ಚಂದ್ರ ಯಶಸ್ವಿಯಾದರು.

ಗಾಯಗೊಂಡ ಕಾನ್‌ಸ್ಟೇಬಲ್‌ ಸತೀಶ್‌ಚಂದ್ರರನ್ನು ಮದ್ದೂರಿನ ಕೆ.ಗುರುಶಾಂತಪ್ಪ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಮೈಸೂರು ರೈಲ್ವೇ ಪೊಲೀಸರು, ಪರಾರಿಯಾಗಿದ್ದ ನಾಲ್ವರನ್ನು 24 ಗಂಟೆಯೊಳಗೆ ಬಂಧಿಸಿದ್ದಾರೆ.

ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ 6 ಮಂದಿಯನ್ನು ಮಾರ್ಚ್ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here