ಗುಂಡ್ಲುಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿ 7 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಗುರುವಾರ ನಡೆದಿದೆ. ಮೈಸೂರು: ಗುಂಡ್ಲುಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿ 7 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಗುರುವಾರ ನಡೆದಿದೆ.
ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗರಗಹನಳ್ಳಿ ಮೊರಾರ್ಜಿ ದೇಸಾಯಿ ಶಾಲೆಯ ಹಾಸ್ಟೆಲ್‌ಗೆ ಸ್ಥಳಾಂತರ ಮಾಡಿಸ ವಸತಿ ಕಲ್ಪಿಸಿ ತರಗತಿ ನಡೆಸಲಾಗುತ್ತಿತ್ತು.
ಇದರಂತೆ ಹಾಸ್ಟೆಲ್ ನಲ್ಲಿ ನಿನ್ನೆ ಆಹಾರ ಸೇವಿಸಿದ ಬಳಿಕ ಏಳು ವಿದ್ಯಾರ್ಥಿಗಳು ಹೊಟ್ಟೆನೋವು ಎಂದು ಹೇಳಿದ್ದಾರೆ. ಕೂಡಲೇ ಅವರನ್ನು ಹೊರೆಯಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ವಾರದ ಹಿಂದೆಯಷ್ಟೇ ಯಡವನಹಳ್ಳಿ ಹಾಸ್ಟೆಲ್‌ನಲ್ಲಿ ಕೋಳಿ ಮಾಂಸ ಸೇವಿಸಿ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಇದೀಗ ಅದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಮಲ್ಲಿಕಾರ್ಜುನ ಅವರು, ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಮಲ್ಲಿಕಾರ್ಜುನ ಅವರು ಭರವಸೆ ನೀಡಿದರು.
ಈ ನಡುವೆ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಪೋಷಕರನ್ನು ನಿಟ್ಟುಸಿರು ಬಿಟ್ಟಿದ್ದಾರೆ.