ಕಿಂಗ್ಸ್ಟನ್ : ಉಸ್ತುವಾರಿ ನಾಯಕ ಬ್ರಂಡನ್ ಕಿಂಗ್ ಅವರ 79 ರನ್ ಗಳ ನೆರವಿನಿಂದ ಟಿ20 ದ್ವಿಪಕ್ಷಿಯ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಪ್ರವಾಸಿ ದಕ್ಷಿಣ ಆಫ್ರಿಕ ತಂಡವನ್ನು ಗುರುವಾರ 28 ರನ್ ಗಳಿಂದ ಸೋಲಿಸಿದೆ.
ಇದರೊಂದಿಗೆ, ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವು 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ನಾಯಕ ರೊವ್ಮನ್ ಪವೆಲ್ ರ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ವಹಿಸಿರುವ ಆರಂಭಕಾರ ಕಿಂಗ್ 79 ರನ್ ಗಳನ್ನು 45 ಎಸೆತಗಳಲ್ಲಿ ಗಳಿಸಿದರು. ಅದರಲ್ಲಿ ಆರು ಸಿಕ್ಸರ್ ಗಳು ಮತ್ತು ಆರು ಬೌಂಡರಿಗಳಿವೆ. ಪವೆಲ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 175 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ, ದಕ್ಷಿಣ ಆಫ್ರಿಕವು, ರೀಝ ಹೆಂಡ್ರಿಕ್ಸ್ ರ ಅರ್ಧ ಶತಕದ ಹೊರತಾಗಿಯೂ 19.5 ಓವರ್ಗಳಲ್ಲಿ 147 ರನ್ ಗಳಿಗೆ ಆಲೌಟಾಯಿತು.
ದಕ್ಷಿಣ ಆಫ್ರಿಕವು ಮೊದಲ ಓವರ್ನಲ್ಲೇ ಕೇವಲ 4 ರನ್ ಗಳಿಗೆ ತಾರಾ ಆರಂಭಕ ಕ್ವಿಂಟನ್ ಡಿಕಾಕ್ ರನ್ನು ಕಳೆದುಕೊಂಡಿತು. ಆ ಬಳಿಕ ಅದು ಚೇತರಿಸಿಕೊಳ್ಳಲಿಲ್ಲ.
ಸಹ ಆರಂಭಿಕ ಹೆಂಡ್ರಿಕ್ಸ್ ಒಂಭತ್ತನೆಯವರಾಗಿ ಔಟಾದರು. ಅವರು 51 ಎಸೆತಗಳಲ್ಲಿ 87 ರನ್ ಗಳನ್ನು ಗಳಿಸಿದರು. ಅದರಲ್ಲಿ ಆರು ಸಿಕ್ಸರ್ಗಳು ಮತ್ತು ಆರು ಬೌಂಡರಿಗಳಿದ್ದವು. ಇದು ಅವರ ಜೀವನಶ್ರೇಷ್ಠ ಇನಿಂಗ್ಸ್ ಆಗಿದೆ.
ದಕ್ಷಿಣ ಆಫ್ರಿಕದ ಬ್ಯಾಟರ್ಗಳು ರನ್ ಗಳಿಕೆಯ ವೇಗವನ್ನು ಹೆಚ್ಚಿಸಲು ಹೆಣಗಾಡಿದರು. ಅವರು 77 ರನ್ ಗಳನ್ನು ಗಳಿಸಲು 10 ಓವರ್ಗಳನ್ನು ತೆಗೆದುಕೊಂಡರು. ವಿಕೆಟ್ ಗಳು ನಿಯಮಿತ ಅಂತರದಲ್ಲಿ ಉರುಳುತ್ತಿದ್ದವು.
ವೆಸ್ಟ್ ಇಂಡೀಸ್ ಸ್ಪಿನ್ನರ್ ಗುಡಕೇಶ್ ಮೋಟೀ 25 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಉರುಳಿಸಿದರು. ಅವರು ನಾಯಕ ರಸೀ ವಾನ್ ಡರ್ ಡಸೆನ್ (17) ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಬಲಿ ಪಡೆದರು.
ಮ್ಯಾಥ್ಯೂ ಬ್ರೀಝ್ಕ್ 19 ರನ್ ಗಳನ್ನು ಗಳಿಸಿದರು.
ವೇಗದ ಬೌಲರ್ ಮ್ಯಾಥ್ಯೂ ಫೋರ್ಡ್ 27 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಉರುಳಿಸಿದರು. ಅವರು ಮೊದಲು ಡಿ ಕಾಕ್ ರನ್ನು ಹಾಗೂ ಬಳಿಕ ಹೆಂಡ್ರಿಕ್ಸ್ ಮತ್ತು ಓಟಿನೀಲ್ ಬಾರ್ಟ್ಮನ್ರನ್ನು ಬೆನ್ನು ಬೆನ್ನಿಗೆ ಔಟ್ ಮಾಡಿದರು.
ವೆಸ್ಟ್ ಇಂಡೀಸ್ನ ಕಿಂಗ್ ತನ್ನ 10ನೇ ಅಂತರ್ರಾಷ್ಟ್ರೀಯ ಅರ್ಧ ಶತಕ ಬಾರಿಸಿದರು. ಅವರು ಎರಡನೇ ವಿಕೆಟ್ಗೆ ಕೈಲ್ ಮೇಯರ್ಸ್ ಜೊತೆಗೆ 79 ರನ್ ಗಳ ಭಾಗೀದಾರಿಕೆ ನಿಭಾಯಿಸಿದರು. ಮೇಯರ್ಸ್ 25 ಎಸೆತಗಳಲ್ಲಿ 34 ರನ್ ಗಳನ್ನು ಗಳಿಸಿದರು.
ಅವರಿಬ್ಬರು ವೆಸ್ಟ್ ಇಂಡೀಸ್ನ ಮೊತ್ತವನ್ನು 10 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 109 ರನ್ಗೆ ಒಯ್ದರು.
ಬಳಿಕ ದಕ್ಷಿಣ ಆಫ್ರಿಕದ ಆಲ್ರೌಂಡರ್ ಆ್ಯಂಡೈಲ್ ಫೆಹ್ಲುಕ್ವಾಯೊ ತನ್ನ ಮಧ್ಯಮ ವೇಗದ ಮೂಲಕ ಎದುರಾಳಿ ತಂಡದ ರನ್ ಗಳಿಕೆಗೆ ತಡೆಯೊಡ್ಡಿದರು. ಅವರು ಕಿಂಗ್ರ ವಿಕೆಟ್ ಪಡೆದರು ಹಾಗೂ ಬಳಿಕ ಫ್ಲೆಚರ್ ಮತ್ತು ಫೆಬಿಯನ್ ಅಲನ್ರ ವಿಕೆಟ್ ಗಳನ್ನು ಉರುಳಿಸಿದರು.
ಫೆಹ್ಲುಕ್ವಾಯೊ ನಾಲ್ಕು ಓವರ್ಗಳಲ್ಲಿ 28 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿದರು.
ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ಬಾರ್ಟ್ಮನ್ 26 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಗಳಿಸಿದರು. ಅವರು ಆರಂಭಿಕ ಜಾನ್ಸನ್ ಚಾರ್ಲ್ಸ್ (1), ಅಕೀಲ್ ಹುಸೈನ್ (2) ಮತ್ತು ಫೋರ್ಡ್ (5)ರ ವಿಕೆಟ್ ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ (20 ಓವರ್ಗಳಲ್ಲಿ) 175-8
ಬ್ರಂಡನ್ ಕಿಂಗ್ 79, ಕೈಲ್ ಮೇಯರ್ಸ್ 34, ರೋಸ್ಟನ್ ಚೇಸ್ 32
ಓಟಿನೀಲ್ ಬಾರ್ಟ್ಮನ್ 3-26, ಆ್ಯಂಡೈಲ್ ಫೆಹ್ಲುಕ್ವಾಯೊ 3-28
ದಕ್ಷಿಣ ಆಫ್ರಿಕ (19.5 ಓವರ್ಗಳಲ್ಲಿ) 147
ರೀಝ ಹೆಂಡ್ರಿಕ್ಸ್ 87, ಮ್ಯಾಥ್ಯೂ ಬ್ರೀಝ್ಕ್ 19, ರಸೀ ವಾನ್ ಡರ್ ಡಸೆನ್ 17
ಮ್ಯಾಥ್ಯೂ ಫೋರ್ಡ್ 3-27, ಓಬೆದ್ ಮೆಕಾಯ್ 2-15, ಗುಡಕೇಶ್ ಮೋಟೀ 3-25