Home Uncategorized ಮ್ಯಾನ್ಮಾರ್: ಉತ್ತರದ ಪ್ರಮುಖ ನಗರ ಬಂಡುಗೋರರ ವಶಕ್ಕೆ

ಮ್ಯಾನ್ಮಾರ್: ಉತ್ತರದ ಪ್ರಮುಖ ನಗರ ಬಂಡುಗೋರರ ವಶಕ್ಕೆ

31
0

ಯಾಂಗಾನ್: ಚೀನಾದ ಗಡಿಭಾಗದಲ್ಲಿರುವ ಮ್ಯಾನ್ಮಾರ್ನ ಪ್ರಮುಖ ನಗರವನ್ನು ವಶಪಡಿಸಿಕೊಂಡಿರುವುದಾಗಿ ಮ್ಯಾನ್ಮಾರ್ ನ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಸಶಸ್ತ್ರ ಮೈತ್ರಿಕೂಟ ಹೇಳಿಕೆ ನೀಡಿದೆ.

ಆನ್ಲೈನ್ ವಂಚನೆ ಪ್ರಕರಣಗಳಿಂದ ಕುಖ್ಯಾತಿ ಪಡೆದಿರುವ ಉತ್ತರ ಮ್ಯಾನ್ಮಾರ್ನ ಲೌಕಾಯಿ ನಗರವನ್ನು ಮೂರು ಸಶಸ್ತ್ರ ಜನಾಂಗೀಯ ಗುಂಪುಗಳ ಒಕ್ಕೂಟ `ತ್ರೀ ಬ್ರದರ್ಹುಡ್ ಅಲಯನ್ಸ್’ ವಶಕ್ಕೆ ಪಡೆದಿರುವುದು 2021ರ ಕ್ಷಿಪ್ರದಂಗೆಯ ಮೂಲಕ ಅಧಿಕಾರ ಪಡೆದಿದ್ದ ಸೇನಾಡಳಿತಕ್ಕೆ ತೀವ್ರ ಹಿನ್ನಡೆಯಾಗಿದೆ. `ಮ್ಯಾನ್ಮಾರ್ ನ್ಯಾಷನಲ್ ಡೆಮೊಕ್ರಟಿಕ್ ಅಲಯನ್ಸ್ ಆರ್ಮಿ(ಎಂಎನ್ಡಿಎಎ), ಅರಾಕಾನ್ ಆರ್ಮಿ(ಎಎ) ಮತ್ತು ತವಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ(ಟಿಎನ್ಎಲ್ಎ)’ ಒಗ್ಗೂಡಿದ ಬಳಿಕ ಉತ್ತರದ ಶಾನ್ ರಾಜ್ಯದಲ್ಲಿ ಸೇನಾಡಳಿತ ತೀವ್ರ ಪ್ರತಿರೋಧ ಎದುರಿಸುತ್ತಿದೆ.

ಲೌಕಾಯಿ ನಗರದಲ್ಲಿ ನವೆಂಬರ್ನಿಂದ ಸಂಘರ್ಷ ಉಲ್ಬಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ನಗರದಿಂದ ಪಲಾಯನ ಮಾಡಿದ್ದರು. `ಲುಕಾಯಿಯಲ್ಲಿ ನಿಯೋಜನೆಗೊಂಡಿದ್ದ ಮ್ಯಾನ್ಮಾರ್ ಸೇನೆಯ ಎಲ್ಲಾ ಸದಸ್ಯರನ್ನೂ ನಿಶ್ಯಸ್ತ್ರಗೊಳಿಸಲಾಗಿದ್ದು ಲುಕಾಯಿ ಈಗ ಸ್ವಚ್ಛ ನಗರವಾಗಿದೆ. ಸೇನಾಧಿಕಾರಿಗಳ ಸಹಿತ ಹಲವು ಯೋಧರನ್ನು ಸೆರೆಹಿಡಿಯಲಾಗಿದೆ’ ಎಂದು ಒಕ್ಕೂಟ ಹೇಳಿದೆ. ಎಂಎನ್ಡಿಎಎ ಈಗ ಲೌಕಾಯಿ ನಗರವನ್ನು ವಶಕ್ಕೆ ಪಡೆದಿದೆ. ಇದು ಅವರ ನೆಲವಾಗಿತ್ತು ಮತ್ತು ಸೇನಾಡಳಿತ ಬಲವಂತವಾಗಿ ನಿಯಂತ್ರಣಕ್ಕೆ ಪಡೆದಿತ್ತು. ಇನ್ನು ಮುಂದೆ ಸ್ಥಳೀಯ ನಿವಾಸಿಗಳು ಸೇನಾಡಳಿದ ದಬ್ಬಾಳಿಕೆಯಿಂದ ಮುಕ್ತವಾಗುತ್ತಾರೆ’ ಎಂದು ಟಿಎನ್ಎಲ್ಎ ಹೇಳಿದೆ.

ಉತ್ತರದ ಭಾಗದಲ್ಲಿ ಸಶಸ್ತ್ರ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿರುವುದು ಚೀನಾ-ಮ್ಯಾನ್ಮಾರ್ ನಡುವಿನ ವ್ಯಾಪಾರವನ್ನು ಹಾನಿಗೊಳಿಸಿದೆ. ಈ ಮಧ್ಯೆ, ಚೀನಾದ ಸಹಾಯಕ ವಿದೇಶಾಂಗ ಸಚಿವ ಸುನ್ ವೆಯ್ಡಾಂಗ್ ಮ್ಯಾನ್ಮಾರ್ಗೆ ಭೇಟಿ ನೀಡಿ ಸೇನಾಡಳಿತದ ಮುಖ್ಯಸ್ಥ ಮಿನ್ ಆಂಗ್ ಹಯಾಂಗ್ ಜತೆ ಸಭೆ ನಡೆಸಿದ್ದು ಗಡಿ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು `ದಿ ಗ್ಲೋಬಲ್ ನ್ಯೂಲೈಟ್ ಆಫ್ ಮ್ಯಾನ್ಮಾರ್’ ಶನಿವಾರ ವರದಿ ಮಾಡಿದೆ.

LEAVE A REPLY

Please enter your comment!
Please enter your name here