ಉಡುಪಿ, ಡಿ.28: ಯಕ್ಷಗಾನ ಕಲಾರಂಗ ಉಡುಪಿ ಕಳೆದ ಎರಡು ದಶಕಗಳಿಂದ ವೃತ್ತಿ ಮೇಳದ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಯನ್ನೊಳಗೊಂಡಿರುವ ಯಕ್ಷ ಡೈರಿಯನ್ನು ಬಿಡುಗಡೆಗೊಳಿಸುತಿದ್ದು, ‘ಯಕ್ಷನಿಧಿ ಡೈರಿ-2024’ರ ಬಿಡುಗಡೆ ಕಾರ್ಯಕ್ರಮ ಬುಧವಾರ ಸಂಸ್ಥೆಯ ಕಚೇರಿಯಲ್ಲಿ ಜರಗಿತು.
ಉಡುಪಿಯ ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ಗಣೇಶ್ ಕಾಂಚನ್ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕಡಂದೇಲು ಪುರುಷೋತ್ತಮ ಭಟ್‌ರ ಮಗ ಕೆ.ಸದಾಶಿವ ಭಟ್ ಡೈರಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು, ಕಲಾವಿದರ ಕ್ಷೇಮಚಿಂತನೆಗೆ ಮಾಡುತ್ತಿರುವ ಕೆಲಸವನ್ನು ಅವರು ಶ್ಲಾಘಿಸಿದರು.
ಯಕ್ಷನಿಧಿ ಡೈರಿಯ ಪ್ರಾಯೋಜಕರು ಹಾಗೂ ಆಗಮಿಸಿದ ವಿವಿಧ ಮೇಳಗಳ ಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಡೈರಿಯನ್ನು ವಿತರಿಸಲಾಯಿತು.
ಕಲಾಪೋಷಕರಾದ ರಾಜಗೋಪಾಲ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಕೋಶಾಧಿ ಕಾರಿ ಕೆ.ಸದಾಶಿವ ರಾವ್, ಎಚ್.ಎನ್. ಶೃಂಗೇಶ್ವರ, ಭುವನ ಪ್ರಸಾದ್ ಹೆಗ್ಡೆ, ಕಿಶೋರ್ ಸಿ. ಉದ್ಯಾವರ, ಅನಂತರಾಜ ಉಪಾಧ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.