Home Uncategorized ಯಕ್ಷಗಾನ ಜನರನ್ನು ಒಗ್ಗೂಡಿಸುತ್ತದೆ: ಮುರಲಿ ಕಡೆಕಾರ್

ಯಕ್ಷಗಾನ ಜನರನ್ನು ಒಗ್ಗೂಡಿಸುತ್ತದೆ: ಮುರಲಿ ಕಡೆಕಾರ್

18
0

ಉಡುಪಿ: ಕರಾವಳಿ ಜಿಲ್ಲೆಗಳ ಯಕ್ಷಗಾನ ಜನರಿಗೆ ಕೇವಲ ಮನೋರಂಜನೆಯನ್ನು ನೀಡುವುದು ಮಾತ್ರವಲ್ಲ, ಅದಕ್ಕಿಂತ ಮುಖ್ಯವಾಗಿ ಅದು ಜನರನ್ನು ಒಗ್ಗೂಡಿಸುತ್ತದೆ. ಜನರು ತಮ್ಮ ಅಸ್ಮಿತೆಯನ್ನು ಮರೆತು ಯಕ್ಷಗಾನದಲ್ಲಿ ಒಂದಾಗುತ್ತಾರೆ ಎಂದು ಉಡುಪಿ ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳಿದ್ದಾರೆ.

ಪುತ್ತೂರಿನ ಪರಶುರಾಮ ಶೆಟ್ಟಿ ಅವರು ಅಂಬಲಪಾಡಿಯಲ್ಲಿ ಏರ್ಪಡಿಸಿದ ಕಟೀಲು ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಮೇಳದ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು. ಯಕ್ಷಗಾನದ ಅಭ್ಯುದಯಕ್ಕೆ ಕಲಾವಿದರೂ ಮುಖ್ಯ, ಸಂಘಟಕರೂ ಮುಖ್ಯ ಎಂದು ಅವರು ನುಡಿದರು.

ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ನಾಲ್ವರು ಕಲಾವಿದರಾದ ಹಿರಿಯ ಮದ್ದಲೆಗಾರ ಚಿಪ್ಪಾರು ಮರಿಯಯ್ಯ ಬಲ್ಲಾಳ, ಹಿರಿಯ ಹಾಸ್ಯಗಾರ, ಲೇಖಕ ರವಿಶಂಕರ ವಳಕ್ಕುಂಜ, ಪ್ರತಿಭಾಶಾಲಿ ಪುಂಡು ವೇಷಧಾರಿ ವೆಂಕಟೇಶ ಕಲ್ಲುಗುಂಡಿ ಮತ್ತು ನೇಪಥ್ಯ ಕಲಾವಿದರಾದ ಕುಪ್ಪೆಪದವು ಸುರೇಶ ಅವರನ್ನು ಸಂಮಾನಿಸಿ ‘ಪವಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸಂಮಾನಿತ ಕಲಾವಿದರ ಪರವಾಗಿ ರವಿಶಂಕರ ವಳಕ್ಕುಂಜ ಕೃತಜ್ಞತೆಯ ನುಡಿಗಳನ್ನಾಡಿದರು. ಡಾ. ಶ್ರುತ ಕೀರ್ತಿರಾಜ್ ಕಲಾವಿದರ ಅಭಿನಂದನಾ ನುಡಿಗಳನ್ನಾಡಿದರು. ಯಕ್ಷಗಾನ ಕಲಾರಂಗದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಅಜಿತ್‌ಕುಮಾರ್, ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಆನಂದ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here