ಹುಬ್ಬಳ್ಳಿ:
ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಾಯಿಸುವ ಕುರಿತಂತೆ ಬಿಜೆಪಿ ರಾಜ್ಯ ಘಟಕ ಇಲ್ಲವೇ ಕೇಂದ್ರ ಘಟಕದ ಮುಂದೆ ಯಾವುದೇ ಪ್ರಸ್ತಾವವಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಾದ ಎಂ ಬಿ ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಬಿಜೆಪಿ ಸೇರುವ ಯಾವುದೇ ಪ್ರಸ್ತಾವವೂ ಪಕ್ಷದ ಮುಂದಿಲ್ಲ ಎಂದು ಹೇಳಿದ್ದಾರೆ.
ಪ್ರವಾಹ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ವಿಷಯಗಳನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು,ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಪ್ರಕೃತಿ ವಿಕೋಪಗಳ ಪರಿಹಾರವಾಗಿ 4,609 ಕೋಟಿ ರೂ. ನೀಡಿತ್ತು. ಆದರೆ, 44,000 ಕೋಟಿ ರೂ ಬೇಡಿಕೆ ಇಡಲಾಗಿತ್ತು. ನರೇಂದ್ರ ಮೋದಿ ಸರ್ಕಾರ ಆರು ವರ್ಷಗಳಲ್ಲಿ 27,208 ಕೋಟಿ ರೂ ಬೇಡಿಕೆಗೆ ಪ್ರತಿಯಾಗಿ 11,753 ಕೋಟಿ ರೂ. ನೀಡಿದೆ ಎಂದು ಹೇಳಿದ್ದಾರೆ.