Home Uncategorized ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ನಾಯಕರ ವಿರುದ್ಧ ಸದಾನಂದಗೌಡ ಅಸಮಾಧಾನ

ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ನಾಯಕರ ವಿರುದ್ಧ ಸದಾನಂದಗೌಡ ಅಸಮಾಧಾನ

31
0

ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಅಶಿಸ್ತು ಪ್ರದರ್ಶಿಸುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ನಾಯಕರಿಗೆ ಧೈರ್ಯ ಇಲ್ಲದಂತೆ ಭಾಸವಾಗುತ್ತಿದೆ ಎಂದು ಸಂಸದ ಡಿ.ವಿ. ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶಿಸ್ತು ಪ್ರದರ್ಶಿಸುತ್ತಿರುವ ಬಾಯಿಗೆ ಬೀಗ ಹಾಕದಿದ್ದರೆ ಪಕ್ಷದ ಚಟುವಟಿಕೆಗಳನ್ನು ಮುಂದುವರೆಸುವುದು ಹೇಗೆ? ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ರಾಜ್ಯದ ನಾಯಕರು ಹಾಗೂ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದರೂ ಯಾಕೆ ಕಡಿವಾಣ ಹಾಕುತ್ತಿಲ್ಲ ಎಂದರು.

ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದರು. ಕೇವಲ ಒಂದು ಗಂಟೆಯಲ್ಲೆ ಅವರಿಗೆ ನೋಟಿಸ್ ಕೊಟ್ಟು ಪಕ್ಷದಿಂದ ಅಮಾನತು ಮಾಡಿದ್ದೆ ಎನ್ನುವ ಮೂಲಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ನಾನು ಈ ಹಿಂದೆ ಅಮಾನತು ಮಾಡಿದ್ದೆ. ಆದರೆ, ನಂತರ ಯಡಿಯೂರಪ್ಪ ಒತ್ತಡ ಹೇರಿ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಅವರಿಂದಾಗಿ ನಾವೆಲ್ಲ ಅನುಭವಿಸುವಂತಾಗಿದೆ. ಅದೇ ರೀತಿ, ಎಂ.ಪಿ.ರೇಣುಕಾಚಾರ್ಯರನ್ನು ಅಮಾನತು ಮಾಡಿದ್ದೆ. ಆಗ, ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಯಡಿಯೂರಪ್ಪ ಅವರಿಂದಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವಂತಾಯಿತು ಎಂದು ಸದಾನಂದಗೌಡ ಹೇಳಿದರು.

ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಅಶಿಸ್ತನ್ನು ಸಹಿಸದೆ ಈ ಕ್ರಮಗಳನ್ನು ಕೈಗೊಂಡಿದ್ದೆ. ಆದರೆ, ಈಗ ಯಾಕೆ ಅಂತಹ ಕ್ರಮ ಕೈಗೊಳ್ಳಲು ಆಗುತ್ತಿಲ್ಲ? ಎಂದು ಪ್ರಶ್ನಿಸಿದ ಅವರು, ಜನಾರ್ದನ ರೆಡ್ಡಿಯನ್ನು ಅಮಾನತು ಮಾಡುವಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದು ಕ್ರಮ ಕೈಗೊಂಡಿದ್ದೆ ಎಂದರು.

ಜನಾರ್ದನ ರೆಡ್ಡಿಯನ್ನು ಅಮಾನತು ಮಾಡಿದ್ದಕ್ಕೆ ಆಗ ಯಡಿಯೂರಪ್ಪ ನನ್ನ ಮೇಲೆಯೆ ಸಿಡಿಮಿಡಿಗೊಂಡು, ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿ ಇರುವುದು ನಿನಗೆ ಇಷ್ಟ ಇಲ್ಲವೇ? ಎಂದು ಪ್ರಶ್ನಿಸಿದ್ದರು ಎಂದು ಸದಾನಂದ ಗೌಡ ಸ್ಮರಿಸಿಕೊಂಡರು.

LEAVE A REPLY

Please enter your comment!
Please enter your name here