ಲಖನೌ: ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲಖನೌದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಮೌರ್ಯ ಅವರ ಆಪ್ತ ಬಿಜೆಪಿ ನಾಯಕರೊಬ್ಬರ ಪ್ರಕಾರ, ಉಪಮುಖ್ಯಮಂತ್ರಿಗಳು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಕೌಶಂಬಿಗೆ ಹೋಗುತ್ತಿದ್ದರು.
ಮೌರ್ಯ, ಅವರ ಸಹಾಯಕ ವಿವೇಕ್ ಮತ್ತು ಇಬ್ಬರು ಪೈಲಟ್ಗಳು ಸೇರಿದಂತೆ ಐದು ಜನರಿಂದ ಹೆಲಿಕಾಪ್ಟರ್ ಲಖನೌನ ಲಾ ಮಾರ್ಟಿನಿಯರ್ ಕಾಲೇಜು ಮೈದಾನದ ಹೆಲಿಪ್ಯಾಡ್ನಿಂದ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
“ಟೇಕ್ ಆಫ್ ಆದ ತಕ್ಷಣ ಹೆಲಿಕಾಪ್ಟರ್ ಒಳಗೆ ಹೊಗೆ ಕಾಣಿಸಿಕೊಂಡಿತು, ಪೈಲಟ್ಗಳು ಲಖನೌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಆಯ್ಕೆ ಮಾಡಿಕೊಂಡರು” ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಮೌರ್ಯ ಅವರು ಆರೋಗ್ಯವಾಗಿದ್ದಾರೆ ಮತ್ತು ನಂತರ ಮತ್ತೊಂದು ಹೆಲಿಕಾಪ್ಟರ್ನಲ್ಲಿ ಕೌಶಂಬಿಗೆ ಹೋಗುತ್ತಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
