ಮಂಗಳೂರು,ಜ.1: ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತು ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ ಎನ್ಎಸ್ಎಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯ ಶಿಬಿರ ಸಮಾರೋಪಗೊಂಡಿತು.
ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಸಮಾರೋಪ ಭಾಷಣ ಮಾಡಿದರು.
ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಸರಿಸುಮಾರು 200 ಪ್ರತಿನಿಧಿಗಳು, ತಮ್ಮ ಪ್ರತಿಭೆಯ ಸಹಬಾಳ್ವೆ ನಡೆಸಿ ಏಕತೆಯ ಅರಿವನ್ನು ಪಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಸ್ಕೃತಿಕ ವಿನಿಮಯ, ಪರಿಸರದ ಅಧ್ಯಯನ, ಏಳಿಗೆಯ ಚಿಂತನ-ಮಂಥನ, ದೈಹಿಕ ಆರೋಗ್ಯ, ಬೌದ್ಧಿಕ ವಿಕಾಸ ಈ ಶಿಬಿರದ ಫಲಶ್ರುತಿಯಾಗಿದೆ. ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ, ಸಂಯೋಜಕರ ಕಾರ್ಯವೈಖರಿ ಶ್ಲಾಘನೀಯವೆಂದರು.
ಯೆನೆಪೋಯ ವಿವಿ ಕುಲಪತಿ ಡಾ. ಎಂ ವಿಜಯಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಯೆನೆಪೊಯ ವಿವಿ ಕುಲಸಚಿವ ಡಾ. ಕೆ.ಎಸ್.ಗಂಗಾಧರ ಸೋಮಯಾಜಿ ಮುಖ್ಯ ಅತಿಥಿಯಾಗಿದ್ದರು.
ಯೆನೆಪೊಯ ವಿವಿ ಎನ್ಎಸ್ಎಸ್ ಘಟಕದ ಸಂಯೋಜಕ ಡಾ. ಅಶ್ವಿನಿ ಶೆಟ್ಟಿ ಶಿಬಿರದ ಏಳು ದಿನಗಳಲ್ಲಿ ನಡೆದ ಕಾರ್ಯಕ್ರಮಗಳ ವೈಶಿಷ್ಟ್ಯವನ್ನು ನಿರೂಪಿಸಿದರು.
ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಗುಜರಾತ್ನಿಂದ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಮನೀಷ್ ಸ್ವಾಗತಿಸಿದರು. ಪವಿತ್ರ ಶೆಟ್ಟಿ ವಂದಿಸಿದರು, ಅವರಿಲ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.
