ನಾಗ್ಪುರ: ಎಡಗೈ ಸ್ಪಿನ್ನರ್ ಗಳಾದ ಹರ್ಷ್ ದುಬೆ (4-65) ಹಾಗೂ ಆದಿತ್ಯ ಸರ್ವಾಟೆ(4-78)ಅವರ ಅಮೋಘ ಪ್ರದರ್ಶನದ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡವನ್ನು 127 ರನ್ ಅಂತರದಿಂದ ಮಣಿಸಿದ ಆತಿಥೇಯ ವಿದರ್ಭ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿದೆ.
ಸಿವಿಲ್ ಲೈನ್ಸ್ ನ ವಿಸಿಎ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಪ್ರಬಲ ಪ್ರತಿರೋಧ ಒಡ್ಡಿದ ವಿದರ್ಭ ಅಂತಿಮ ದಿನವಾದ ಮಂಗಳವಾರ ಕರ್ನಾಟಕವನ್ನು ಮಣಿಸಿ ಅಂತಿಮ-4ರ ಹಂತ ತಲುಪುವಲ್ಲಿ ಶಕ್ತವಾಗಿದೆ.
ಗೆಲ್ಲಲು 371 ರನ್ ಗುರಿ ಪಡೆದಿದ್ದ ಕರ್ನಾಟಕ ತಂಡ ಸೋಮವಾರ 4ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ ಉತ್ತಮ ಆರಂಭವನ್ನು ಪಡೆದಿತ್ತು. ಐದನೇ ದಿನವಾದ ಮಂಗಳವಾರ ವಿದರ್ಭ ತಂಡ ಪ್ರತಿಹೋರಾಟ ನೀಡಿತು. ಕರ್ನಾಟಕದ ಬ್ಯಾಟಿಂಗ್ ಸರದಿ ದಿಢೀರ್ ಕುಸಿತ ಕಂಡ ಕಾರಣ ವಿದರ್ಭ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಭರ್ಜರಿ ಆರಂಭ ಪಡೆದು ಗೆಲುವಿನ ವಿಶ್ವಾಸದಲ್ಲಿದ್ದ ಕರ್ನಾಟಕ ತಂಡಕ್ಕೆ ಹರ್ಷ್ ದುಬೆ ಹಾಗೂ ಆದಿತ್ಯ ಸರ್ವಾಟೆ ದುಸ್ವಪ್ನವಾಗಿ ಕಾಡಿದರು. ದಿನದಾಟದ ಮೊದಲ ಒಂದು ಗಂಟೆಯ ಅವಧಿಯಲ್ಲಿ ನಾಯಕ ಮಯಾಂಕ್ ಅಗರ್ವಾಲ್(70 ರನ್, 98 ಎಸೆತ), ನಿಕಿನ್ ಜೋಸ್(0) ಹಾಗೂ ಮನೀಶ್ ಪಾಂಡೆ(1 ರನ್)ಅವರಂತಹ ಪ್ರಮುಖ ಆಟಗಾರರನ್ನು ಕಳೆದುಕೊಂಡ ಕರ್ನಾಟಕ ಭಾರೀ ಹಿನ್ನಡೆ ಕಂಡಿತು.
ಅನೀಶ್ ಕೆ.ವಿ. 73 ಎಸೆತಗಳಲ್ಲಿ 40 ರನ್ ಗಳಿಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಅನೀಶ್ ಹಾಗೂ ಹಾರ್ದಿಕ್ ರಾಜ್(13 ರನ್)40 ರನ್ ಜೊತೆಯಾಟದ ಮೂಲಕ ಗೆಲುವಿನ ವಿಶ್ವಾಸ ಮೂಡಿಸಿದರು. ಅಮೋಘ ಬೌಲಿಂಗ್ ಮಾಡಿದ ದುಬೆ, ಹಾರ್ದಿಕ್ ರಾಜ್ ಹಾಗೂ ಶ್ರೀನಿವಾಸ್ ಶರತ್(6 ರನ್) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ವಿದರ್ಭಕ್ಕೆ ಗೆಲುವು ಖಚಿತಪಡಿಸಿದರು.
ವಿಜಯ್ ಕುಮಾರ್ ವೈಶಾಕ್(34 ರನ್) ಹಾಗೂ ವಿದ್ವತ್ ಕಾವೇರಪ್ಪ(25 ರನ್)ಸೋಲಿನ ಅಂತರವನ್ನು ತಗ್ಗಿಸಲು ಪ್ರಯತ್ನಿಸಿದರು. ಈ ಇಬ್ಬರನ್ನು ಹರ್ಷ್ ದುಬೆ ಪೆವಿಲಿಯನ್ ಗೆ ಕಳುಹಿಸಿದರು.
ಅಂತಿಮವಾಗಿ ಕರ್ನಾಟಕದ ಪ್ರಯತ್ನ ಸಾಕಾಗದೆ 62.4 ಓವರ್ಗಳಲ್ಲಿ 243 ರನ್ ಗೆ ಆಲೌಟಾಯಿತು. ಈ ಸೋಲಿನ ಮೂಲಕ ಸೆಮಿ ಫೈನಲ್ ಸ್ಪರ್ಧೆಯಿಂದ ಹೊರ ಬಿದ್ದಿದೆ.
ಭರ್ಜರಿ ಗೆಲುವಿನೊಂದಿಗೆ ವಿದರ್ಭ ತಂಡ ಈಗಾಗಲೇ ರಣಜಿಯಲ್ಲಿ ಸೆಮಿ ಫೈನಲ್ ತಲುಪಿರುವ ಮಧ್ಯಪ್ರದೇಶ, ಮುಂಬೈ ಹಾಗೂ ತಮಿಳುನಾಡು ತಂಡವನ್ನು ಸೇರಿಕೊಂಡಿದೆ. ಮಾರ್ಚ್ 2ರಿಂದ ಆರಂಭವಾಗಲಿರುವ ಮೊದಲ ಸೆಮಿ ಫೈನಲ್ ನಲ್ಲಿ ವಿದರ್ಭ ತಂಡ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.
ಪಂದ್ಯದಲ್ಲಿ ಏಳು ವಿಕೆಟ್ ಗೊಂಚಲು ಪಡೆದಿರುವ ಆದಿತ್ಯ ಸರ್ವಾಟೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.