ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣ ಎಣಿಸುತ್ತಿರುವ ಫೋಟೋ ವೈರಲ್ ಆಗಿದೆ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ. ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣ ಎಣಿಸುತ್ತಿರುವ ಫೋಟೋ ವೈರಲ್ ಆಗಿದೆ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದಾರೆಂಬುದು ಸುಳ್ಳು. ಎಚ್.ಡಿ ಕುಮಾರಸ್ವಾಮಿ ಹಸಿ ಸುಳ್ಳು ಹೇಳುವುದರ ಮೂಲಕ ಹತಾಶ ಸ್ಥಿತಿಗೆ ತಲುಪಿದ್ದಾರೆ. ಕುಮಾರಸ್ವಾಮಿ ನನ್ನ ಮೇಲೆ ಮಾಡಿದ ಆರೋಪ ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು, ಅತ್ಯಂತ ಬೇಜವಾಬ್ದಾರಿಯಿಂದ ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವುದರ ಮೂಲಕ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ. ಕುಮಾರಸ್ವಾಮಿಯವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು.
ಸಾಂಟ್ರೋ ರವಿಯ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಿ ವಿಚಾರಣೆ ಮಾಡಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ. ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು ಕುಮಾರಸ್ವಾಮಿ ಸತ್ಯಕ್ಕೆ ಅಪಚಾರವಾಗುವಂತಹ ಆಪಾದನೆ ಮಾಡಿದ್ದಾರೆ. ನನ್ನನ್ನು ಯಾವ ಕಾರಣದಿಂದ ತೇಜೋವಧೆ ಮಾಡುತ್ತಿದ್ದಾರೆ, ಎಂದು ತಿಳಿದಿಲ್ಲ. ಇದರಿಂದ ಅವರಿಗೆ ಯಾವ ರೀತಿ ಲಾಭವಾಗುತ್ತದೆ ಗೊತ್ತಿಲ್ಲ. ಗೃಹ ಸಚಿವನಾದ ನನ್ನನ್ನು ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ ದಿನನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೇಳಿದ್ದಾರೆ.
ಸ್ಯಾಂಟ್ರೋ ರವಿ ಜೊತೆಗೆ ಸಚಿವರು, ಬಿಜೆಪಿ ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆ-ಕಂತೆ ನೋಟುಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣದ ಲೆಕ್ಕ ಹಾಕುತ್ತಿರುವ ಫೋಟೋ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದರು.
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಗೃಹ ಸಚಿವರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೋ ವೈರಲ್ ಆಗಿದೆ. ಆರಗ ಮನೆಯಲ್ಲಿ ಲೆಕ್ಕ ಹಾಕಿದ ಹಣದ ಫೋಟೋ ತೆಗೆದವರು ಯಾರು? ಎಸಿಪಿ ವರ್ಗಾವಣೆ ಮಾಡಿಸಲು 15 ಲಕ್ಷ ಹಣ ಎಣಿಸುತ್ತಿರುವುದಂತೆ. ಇದು ಗೃಹಸಚಿವರ ನಿವಾಸದಲ್ಲೇ ನಡೆದಿದೆ, ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದರು.