ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿ ಕೆಎಎಸ್ಆರ್ಟಿಸಿ ಬಸ್ ಚಾಲಕ ಜಗದೀಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಡಿಪೋದಲ್ಲಿ ನಡೆದಿದೆ. ಮಂಡ್ಯ: ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿ ಕೆಎಎಸ್ಆರ್ಟಿಸಿ ಬಸ್ ಚಾಲಕ ಜಗದೀಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಡಿಪೋದಲ್ಲಿ ನಡೆದಿದೆ.
ಅಸ್ವಸ್ಥಗೊಂಡಿರುವ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವರ್ಗಾವಣೆಯಿಂದ ಬೇಸತ್ತು ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಾಗಮಂಗಲದ ಕೆಎಸ್ಆರ್ಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕ ಹೆಚ್.ಆರ್ ಜಗದೀಶ್ ಅವರನ್ನು ರಾಜಕೀಯ ಒತ್ತಡದ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಖಾಸಗಿ ಫೋಟೋಗಳ ಸೋರಿಕೆ ಮಾಡುವುದಾಗಿ ಬಾಯ್ ಫ್ರೆಂಡ್ ಬ್ಲ್ಯಾಕ್ ಮೇಲ್: ಯುವತಿ ಆತ್ಮಹತ್ಯೆ
ಈ ಸಂಬಂಧ ಜಗದೀಶ್ ಅವರಿಗೆ ವರ್ಗಾವಣೆ ಆದೇಶ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ವರ್ಗಾವಣೆ ಆದೇಶ ತೆಗೆದುಕೊಳ್ಳದೇ ಜಗದೀಶ್ ನಾಗಮಂಗಲ ಬಸ್ ಡಿಪೋ ಮುಂದೆಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿದ ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿನ ಸಿಬ್ಬಂದಿ ಯತ್ನಿಸಿದರೂ ವರ್ಗಾವಣೆ ಆದೇಶ ರದ್ದುಗೊಳಿಸುವವರೆಗೂ ಹೋಗುವುದಿಲ್ಲ ಎಂಬುದಾಗಿ ಹಠ ಹಿಡಿದಿದ್ದಾರೆ. ಕೊನೆಗೆ ಜಗದೀಶ್ ಅವರ ಮನವೊಲಿಸಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ನನ್ನ ಸಾವಿಗೆ ಪತಿ ಮತ್ತು ಆತನ ಗರ್ಲ್ ಫ್ರೆಂಡ್ ಕಾರಣ; ವಾಟ್ಸಾಪ್ ಸ್ಟೇಟಸ್ ಹಾಕಿ ಗೃಹಿಣಿ ನೇಣಿಗೆ ಶರಣು
ನನ್ನ ವರ್ಗಾವಣೆಗೆ ರಾಜಕೀಯ ಒತ್ತಡವೇ ಕಾರಣ. ರಾಜಕೀಯ ದ್ವೇಷದಿಂದ ನನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಎಂದು ಜಗದೀಶ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಪೋ ಉಸ್ತುವಾರಿ ಮಂಜುನಾಥ್, ಚಾಲಕ ಜಗದೀಶ್ ಮಹಿಳಾ ಪ್ರಯಾಣಿಕರ ಜೊತೆ ಅನುಚಿತ ವರ್ತನೆ ತೋರಿರುವುದಾಗಿ ದೂರು ಬಂದಿತ್ತು. ಆ ದೂರಿನ ಅನ್ವಯ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಆತ್ಮಹತ್ಯೆಗೆ ಯತ್ನಿಸಿದ ಚಾಲಕನನ್ನು ಮಾಜಿ ಸಿಎಂ ಎಚ್. ಕುಮಾರಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ರಾಜಕೀಯ ದ್ವೇಷಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.