ಬೆಂಗಳೂರು:
ನಾಳೆ ನಡೆಯಲಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಕಲ ಸಿದ್ದತೆ ಮಾಡಲಾಗಿದ್ದು ಬೇರೆ ರಾಜ್ಯಗಳಿಂದ ಬಂದಿರುವ ಅರೆ ಸೈನಿಕ ಪಡೆಯ ಬೂಟಿನ ಸಪ್ಪಳ ಜೋರಾಗಿ ಕೇಳಿಸುತ್ತಿದೆ. ಕ್ಷೇತ್ರದ ವ್ಯಾಪ್ತಿಯ ಅರೆ ಸೈನಿಕ ಸಿಬ್ಬಂದಿ ಮತ್ತು ಪೊಲೀಸರ ಸಂಚಾರ ಹೆಚ್ಚಾಗಿ ಎಲ್ಲ ಕಡೆ ಕಾಕಿಮಯವಾಗಿದೆ.
ಈಗಾಗಲೇ ಇದ್ದ 27 ಎಫ್.ಎಸ್.ಟಿ ತಂಡಗಳ ಜೊತೆಗೆ ವಾರ್ಡ್ ಗಳಿಗೆ ಹೆಚ್ಚುವರಿ 9 ಫ್ಲೈಯಿಂಗ್ ಸ್ಕ್ಯಾಡ್, 36 ಮಾರ್ಷಲ್ಸ್ ನಿಯೋಜನೆ ಮಾಡಲಾಗಿದೆ. ಮಸ್ಟರಿಂಗ್ ಸೆಂಟರ್ ತೆರೆಯಲಾಗಿದ್ದು ಚುನಾವಣಾ ಸಿಬ್ಬಂದಿಗಳು ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಸೇರಿ ಮತಯಂತ್ರ ಇತರೆ ಚುನಾವಣಾ ಪರಿಕರಗಳೊಂದಿಗೆ ನಿಯೋಜಿತ ಮತಗಟ್ಟೆಗಳತ್ತ ತೆರಳುತ್ತಿದ್ದು ಒಟ್ಟಾರೆ ಚುನಾವಣಾ ಜ್ವರ ತಾರಕ್ಕಕೆ ಮುಟ್ಟಿದೆ.
ನಾಳೆ, ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಪ್ರತೀ ಮತಗಟ್ಟೆಗೆ ಒಬ್ಬೊಬ್ಬ ಆರೋಗ್ಯಾಧಿಕಾರಿ ನೇಮಕ ಮಾಡಲಾಗಿದ್ದು, ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸ್ ಮಾಡಲು, ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಕೈ ಗ್ಲೌಸ್ ಸಹ ನೀಡಲಾಗುತ್ತದೆ. ಇ.ವಿ.ಎಮ್, ವಿವಿಪ್ಯಾಟ್ ಗಳ ರವಾನೆಗೆ 125 ಬಿಎಂಟಿಸಿ 50 ಮಿನಿ ಬಸ್ ಗಳನ್ನು ನಿಯೋಜಿಸಲಾಗಿದೆ.