Home Uncategorized ರಾಜಿ ಇತ್ಯರ್ಥಕ್ಕೆ ಅತ್ಯಾಚಾರ ಸಂತ್ರಸ್ತೆಗೆ ಬಲವಂತ; ಚಲಿಸುತ್ತಿದ್ದ ಕಾರಿನಿಂದ ತಳ್ಳಿದ ದುಷ್ಕರ್ಮಿಗಳು

ರಾಜಿ ಇತ್ಯರ್ಥಕ್ಕೆ ಅತ್ಯಾಚಾರ ಸಂತ್ರಸ್ತೆಗೆ ಬಲವಂತ; ಚಲಿಸುತ್ತಿದ್ದ ಕಾರಿನಿಂದ ತಳ್ಳಿದ ದುಷ್ಕರ್ಮಿಗಳು

14
0

ಆಗ್ರಾ: ನವೆಂಬರ್ 11ರಂದು ಹೋಂಸ್ಟೇಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ರಾಜಿ ಇತ್ಯರ್ಥದ ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡು, ಆಕೆಯನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ರಸ್ತೆಗೆ ತಳ್ಳಿದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ಭಾನುವಾರ ಸ್ನೇಹಿತೆಯೊಬ್ಬರು ರೆಸ್ಟೋರೆಂಟ್ ನಲ್ಲಿ ಸಭೆಗೆ ಆಹ್ವಾನಿಸಿದ್ದರು. ಆಗ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಲಾಗಿತ್ತು ಎಂದು ಸಂತ್ರಸ್ತೆ ಹೇಳಿದ್ದಾಗಿ ಪೊಲೀಸರು ವಿವರಿಸಿದ್ದಾರೆ. ಬಳಿಕ ಅತ್ಯಾಚಾರ ಆರೋಪಿಯ ಪರವಾಗಿ ಸಂಧಾನ ಪತ್ರಕ್ಕೆ ಸಹಿ ಮಾಡುವಂತೆ ಬಲವಂತಪಡಿಸಲಾಯಿತು. ಆ ಬಳಿಕ ಚಲಿಸುವ ಕಾರಿನಿಂದ ತಳ್ಳಲಾಯಿತು ಎಂದು ಹೇಳಲಾಗಿದೆ.

“ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾಗಿ ಮಾಹಿತಿ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಹಿಳೆಯ ದೂರು ಸ್ವೀಕರಿಸಿದ ಬಳಿಕ ಶೀಘ್ರವೇ ಎಫ್ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಪಿ ಸೂರಜ್ ಕುಮಾರ್ ರಾಯ್ ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರ ನಡೆದ ಅತಿಥಿಗೃಹದಲ್ಲಿ ಈ ಯುವತಿ 18 ತಿಂಗಳಿನಿಂದ ಉದ್ಯೋಗದಲ್ಲಿದ್ದರು. ವ್ಯವಸ್ಥಾಪಕ ಸೇರಿದಂತೆ ಐದು ಮಂದಿ ಈಕೆಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಇದಕ್ಕೂ ಮುನ್ನ “ನನಗೆ ನಾಲ್ಕು ಮಂದಿ ಹೆಣ್ಣುಮಕ್ಕಳಿದ್ದಾರೆ. ಅವರಿನ್ನೂ ಚಿಕ್ಕವರು. ನನ್ನನ್ನು ದಯವಿಟ್ಟು ರಕ್ಷಿಸಿ. ನನಗೆ ಏನು ಮಾಡಿದ್ದಾರೆ ನೋಡಿ” ಎಂದು ಹರಿದ ಬಟ್ಟೆಯನ್ನು ಪ್ರದರ್ಶಿಸುತ್ತಾ ಮಹಿಳೆ ಅಂಗಲಾಚುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

LEAVE A REPLY

Please enter your comment!
Please enter your name here