ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆ, ಬಳಕೆ ಮತ್ತು ಅವುಗಳ ಕಾರ್ಯಾಚರಣೆಗೆ ಖಾಸಗಿ ಆ್ಯಪ್ ಗಳನ್ನು ಬಳಸುವುದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ಎಲ್ಲ ರೀತಿಯ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸರಕಾರ ರದ್ದುಗೊಳಿಸಿದೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪಾ .ವಿ.ಎಸ್, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಅಗತ್ಯತೆ ಮತ್ತು ಜಾರಿಯ ಬಗ್ಗೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿದಂತೆ ವರದಿಯು ಪೂರಕವಾಗಿಲ್ಲ. ಪ್ರಸ್ತುತ ಕೆಲವು ಆ್ಯಪ್ ಆಧಾರಿತ ಖಾಸಗಿ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿಯ ನಿಯಮಗಳನ್ನು ಉಲ್ಲಂಘಿಸಿ ಸಾರಿಗೇತರ ವಾಹನಗಳನ್ನು ಸಾರಿಗೆ ವಾಹನವಾಗಿ ಬಳಸುತ್ತಿರುವುದು ಕಂಡುಬಂದಿದೆ.
ಸಾರ್ವಜನಿಕ ಸಾರಿಗೆಗಾಗಿ ಹಾಗೂ ಸ್ವಯಂ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ 2021ರಲ್ಲಿ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಈ ಯೋಜನೆಯಿಂದ ಖಾಸಗಿ ಕ್ಷೇತ್ರಗಳಲ್ಲಿನ ಟ್ಯಾಕ್ಸಿ, ಆಟೊ, ಕ್ಯಾಬ್, ಸಂಘಗಳು ಮತ್ತು ಚಾಲಕರು, ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಹಲವು ಬಾರಿ ಸಂಘರ್ಷ ನಡೆದು ಮೊಕದ್ದಮೆಗಳು ದಾಖಲಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು. ಹಾಗೂ ಮಹಿಳೆಯರ ಅಸುರಕ್ಷಿತವಾಗಿರುವುದನ್ನು ಗಮನಿಸಲಾಗಿದೆ.
ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ, ಪ್ರವರ್ತನ ಚಟುವಟಿಕೆಯ ಸಮರ್ಥ ಕಾರ್ಯನಿರ್ವಹಣೆಗೆ ಈ ಯೋಜನೆ ಕಷ್ಟವಾಗುತ್ತದೆ. ಆದುದರಿಂದ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021ನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.