ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಡಿಮೆ ಸ್ಥಾನ, ವಾಲ್ಮೀಕಿ ನಿಗಮದಲ್ಲಿ ಹಗರಣ ಆರೋಪ ಹಿನ್ನೆಲೆ ಸಚಿವರ ಜತೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳ ಉಸ್ತುವಾರಿ ಹೊತ್ತ ಸಚಿವರು ಕ್ಷೇತ್ರದಲ್ಲಿ ಕಡಿಮೆ ಮತಗಳಿಸಿ, ಸೋತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್, ನೀವು ಹೇಳಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿತ್ತು. ಗೆಲ್ಲಿಸುವಲ್ಲಿ ವಿಫಲರಾಗಿದ್ದೀರಿ. ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಸಚಿವರು ರಾಜ್ಯ ಸರ್ಕಾರದ ವರ್ಚಸ್ಸಿಗೆ ದಕ್ಕೆ ಬರದ ಹಾಗೆ ನೋಡಿಕೊಳ್ಳಬೇಕು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ವಿರೋಧ ಪಕ್ಷಗಳ ವಾಗ್ದಾಳಿಗೆ ಸಿಲುಕದಂತೆ ಕೆಲಸ ಮಾಡಲು ಎಲ್ಲ ಸಚಿವರಿಗೆ ರಾಹುಲ್ ಗಾಂಧಿ ಸೂಚನೆ ಎಂದು ತಿಳಿದು ಬಂದಿದೆ.