ಬೆಂಗಳೂರು: ರಾಜ್ಯದಲ್ಲಿ ಪೋಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಪರಿಣಾಮವಾಗಿ ರಾಜ್ಯವನ್ನು ಉಗ್ರರು ಅಡಗುತಾಣವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕಿ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, “ಮಾಫಿಯಾಗಳು-ರೌಡಿಗಳ ಅಟ್ಟಹಾಸ ಮೇರೆ ಮೀರಿದೆ, ಅಕ್ರಮ ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ, ಕ್ರಿಮಿನಲ್ ಗಳನ್ನು ಬಂಧಿಸಲು ಹೊರಟರೆ ಮತೀಯ ಅಲ್ಪ ಸಂಖ್ಯಾತರ ಹೆಸರಿನಲ್ಲಿ ಪೋಲಿಸ್ ಠಾಣೆಗಳಿಗೆ ಬೆಂಕಿಹಾಕಲು ಈ ನೆಲದ ಕಾನೂನಿನ ಬಗ್ಗೆ ಕಿಂಚಿತ್ತು ಭಯ ವಿಲ್ಲದ ವಿಧ್ವಂಸಕ ಶಕ್ತಿಗಳು ಗುಂಪುಗೂಡಿ ಪೋಲಿಸ್ ಠಾಣೆಗಳಿಗೇ ದಾಳಿಮಾಡಿ ಬೆಂಕಿ ಹಚ್ಚಲು ಮುಂದಾಗುತ್ತಿವೆ, ಇದಕ್ಕೆಲ್ಲ ರಾಜ್ಯವಾಳುತ್ತಿರುವ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ, ಮುಸ್ಲಿಂ ಮತ ಓಲೈಕೆ ಈ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ” ಎಂದು ಹೇಳಿದರು.
ʼರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದಲ್ಲಿ ಬಂಧಿಯಾಗುತ್ತಿರುವ ಭಯೋತ್ಪಾದಕ ಶಕ್ತಿಗಳು ಈ ಘಟನೆಗಳ ಹಿಂದಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಲ್ಪಿಸಬೇಕಾದ ಪೊಲೀಸರು ಹಾಗೂ ಪೊಲೀಸ್ ಠಾಣೆಗೇ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಿದೇ ಎಂದರೆ ಪರಿಸ್ಥಿತಿ ಯಾವ ಹಂತ ತಲುಪುತ್ತಿದೆʼ ಎಂದು ಅಂದಾಜಿಸಬಹುದಾಗಿದೆ.
ಅಂದು ಡಿಜೆ ಹಳ್ಳಿ, ಮೊನ್ನೆ ಉಡುಪಿ, ಇಂದು ದಾವಣಗೆರೆಯ ಚೆನ್ನಗಿರಿಯಲ್ಲಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಧ್ವಂಸಗೊಳಿಸುವ ಮಟ್ಟಿಗೆ ದಾಳಿ ನಡೆಸುವಷ್ಟು ಮೂಲಭೂತವಾದ ಶಕ್ತಿಗಳು ಸಂಘಟಿತರಾಗಿದ್ದಾರೆ ಎಂದರೆ ನಾವು ಯಾವ ರಾಜ್ಯದಲ್ಲಿದ್ದೇವೆ?. ಯಾವ ಸಮಾಜದಲ್ಲಿ ಇದ್ದೇವೆ ?. ಎನ್ನುವ ಆತಂಕ ಕಾಡುತ್ತಿದೆ ಎಂದು ಹೇಳಿದರು.
ಸರಕಾರ ಕರುನಾಡನ್ನ ಅಶಾಂತಿಯ ಕೊಂಪೆ ಮಾಡಲು ಹೊರಟಿದೆ :
ಬಿಹಾರದಲ್ಲಿ ಲಲ್ಲುಪ್ರಸಾದ್ ಯಾದವ್ ಆಡಳಿತ ನಡೆಸಿದ ದಿನಗಳು ಕರ್ನಾಟಕದಲ್ಲಿ ಮತ್ತೆ ತಲೆ ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ಎಂದು ಕರೆದ ಕುವೆಂಪು ಕಲ್ಪನೆಯನ್ನು ಕೊಲ್ಲಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಕರುನಾಡನ್ನು ಅಭದ್ರತೆಯ ಅಶಾಂತಿಯ ಕೊಂಪೆ ಮಾಡಲು ಹೊರಟಿದೆ. ಪೊಲೀಸರ ನೈತಿಕ ಶಕ್ತಿ ಸಂಪೂರ್ಣವಾಗಿ ಕುಗ್ಗಿಸುವ ವ್ಯವಸ್ಥೆಯ ಜಾಲ ಕೆಲಸ ಮಾಡುತ್ತಿದೆ ಎಂದರು.
ಪೊಲೀಸರು ಹಾಗೂ ಪೊಲೀಸ್ ಠಾಣೆಗಳೇ ರಕ್ಷಣೆಗೆ ಮೋರೆ ಇಡುವ ಪರಿಸ್ಥಿತಿ ಇರುವಾಗ ರಕ್ಷಣೆಗಾಗಿ ಜನರು ಯಾರ ಮೊರೆ ಹೋಗಬೇಕು ಎನ್ನುವುದು ತಿಳಿಯದಾಗಿದೆ. ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಪೊಲೀಸ್ ಬೇಲಿಯನ್ನೇ ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮೂಲಭೂತವಾದಿ ಅಲ್ಪಸಂಖ್ಯಾತರಿಗಾಗಿಯೇ ನಾವು ಆಡಳಿತ ನಡೆಸುವುದು, ಅವರ ಪರವಾಗಿ ನಿಲ್ಲುವುದು ಹಾಗೂ ಅವರ ಚಟುವಟಿಕೆಗಳಿಗೆ ಮುಕ್ತ ಸ್ವಾತಂತ್ರ್ಯ ಕಲ್ಪಿಸುವುದೇ ತಮ್ಮ ಧ್ಯೇಯ ಎಂದು ಘೋಷಿಸಿಬಿಡಲಿ, ಆಗ ಈ ಸರ್ಕಾರವನ್ನು ನೆಚ್ಚಿಕೊಳ್ಳದೇ ಜನ ಸ್ವಯಂ ರಕ್ಷಣೆ ಮಾಡಿಕೊಳ್ಳುತ್ತಾರೆ. ರಾಜ್ಯದ ಸದ್ಯದ ಬೆಳವಣಿಗೆಗಳು ಜನತೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ ಎಂದು ಹೇಳಿದರು.
ಸರಕಾರದಿಂದ ವರದಿ ಪಡೆಯಲಿ:
ಗೌರವಾನ್ವಿತ ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ. ಅಂತೆಯೇ ಪೊಲೀಸ್ ಠಾಣೆಗಳಿಗೆ ದಾಳಿ ಮಾಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ಬರಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಮನವಿ ಮಾಡುತ್ತೇನೆ ಎಂದರು.