ಬೆಂಗಳೂರು, ನ.17: ನಿಮ್ಮೆಲ್ಲರ ಸಹಕಾರದಿಂದ ನಾನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದೇನೆ. ನಮ್ಮ ಪಕ್ಷದ ಎಲ್ಲ ಶಾಸಕರು ನಾಯಕರೇ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ. ಕಾಂಗ್ರೆಸ್ ಸರಕಾರ ಮಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತವನ್ನು ಜನರ ಮುಂದೆ ಇಡುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಆರ್.ಅಶೋಕ್ ತಿಳಿಸಿದರು.
ಗುರುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ನಾವು ವಿಪಕ್ಷ ನಾಯಕ ಇಲ್ಲದಿದ್ದರೂ ಸರಕಾರದ ವಿರುದ್ಧ ಹೋರಾಟ ಮಾಡಿದ್ದೇವೆ. ನಮ್ಮ 10 ಜನ ಶಾಸಕರನ್ನು ಅಮಾನತು ಮಾಡಲಾಯಿತು ಎಂದರು.
ಯಡಿಯೂರಪ್ಪ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶನ, ಬಸವರಾಜ ಬೊಮ್ಮಾಯಿ ಅವರ ಸಹಕಾರ ಪಡೆದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಮತ್ತೆ ಕಮಲ ಅರಳುವಂತೆ ಮಾಡುತ್ತೇವೆ. ಲೋಕಸಭೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯಿತ, ಬಿಬಿಎಂಪಿ ಚುನಾವಣೆಗಳು ನಮ್ಮ ಮುಂದಿವೆ. ಒಳ್ಳೆಯ ಫಲಿತಾಂಶ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಶೋಕ್ ಹೇಳಿದರು.
45 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ತುರ್ತು ಪರಿಸ್ಥಿತಿಯಲ್ಲಿ ನಾನು ಎಲ್.ಕೆ.ಅಡ್ವಾಣಿ ಅವರ ಜೊತೆ ಜೈಲು ವಾಸ ಅನುಭವಿಸಿದ್ದೇನೆ. ನಮಗೆ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ಅವರ ನಾಯಕತ್ವ ಇದೆ. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಆರು ತಿಂಗಳಲ್ಲಿ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ಸ್ವತಃ ಮುಖ್ಯಮಂತ್ರಿಯ ಮಗನೆ ವರ್ಗಾವಣೆ ದಂಧೆಯಲ್ಲಿ ಇರುವುದು ಜನರಿಗೆ ಬೇಸರ ತಂದಿದೆ. ದೇಶದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲ ಶಾಸಕರು ಸಹಕಾರ ನೀಡಬೇಕು. ಎಲ್ಲರ ಸಹಕಾರ ಪಡೆದು ವಿಧಾನಸಭೆ ಒಳಗಡೆ ಹಾಗೂ ಹೊರಗಡೆ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡೋಣ ಎಂದು ಅಶೋಕ್ ಕರೆ ನೀಡಿದರು.
”ಬಿಜೆಪಿಯಲ್ಲಿ ಪ್ರಬಲ ನಾಯಕನಾಗಿರುವ ಆರ್.ಅಶೋಕ್ ಅವರಿಗೆ ಹೊಸ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಅಶೋಕ್ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಿ ಬೆಳೆಯಲಿದೆ. ಇವರಿಬ್ಬರೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟನೆ ಮಾಡಲಿದ್ದಾರೆ. ಸರಕಾರದ ವಿರುದ್ಧ ಹೋರಾಟ ಮಾಡಲಿದ್ದಾರೆ”
ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ