ಬೆಂಗಳೂರು: ರಾಜ್ಯದಲ್ಲಿ ಎಲ್ಲ ರೀತಿಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ. ವಾದ ಆಲಿಸುವ ವೇಳೆ ನ್ಯಾಯಪೀಠ, ಹುಕ್ಕಾ ಬಳಕೆಯನ್ನು ಸರ್ಕಾರವು ಅತಿರೇಕವಾಗುವ ಮೊದಲು ನಿಭಾಯಿಸಿದ್ದರೆ ಉತ್ತಮವಾಗಿ ನಿಯಂತ್ರಣ ಮಾಡಬಹುದಿತ್ತು.
20 ವರ್ಷಗಳ ಹಿಂದೆ ಇದೆಲ್ಲಾ ಎಲ್ಲಿತ್ತು (ನಿಯಂತ್ರಣ ಅಥವಾ ನಿಷೇಧ)? ಇದು ಅತಿರೇಕವಾದ ನಂತರ ಎಚ್ಚೆತ್ತುಕೊಂಡಿದ್ದೀರಾ?. ಬಣ್ಣ ಮಿಶ್ರಣ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದು ಇಂದಲ್ಲ 25 ವರ್ಷದ ಹಿಂದೆ ಇತ್ತು. ಪಾಶ್ಚಿಮಾತ್ಯ ರಾಷ್ಟ್ರಗಳು ಅದಕ್ಕೆ ನಿಷೇಧ ವಿಧಿಸಿದೆ. ಗೋಬಿ ಮಂಚೂರಿಯನ್‌ನಲ್ಲಿ ಬಳಸುವ ಬಣ್ಣವನ್ನು ಬಟ್ಟೆ ತೊಳೆಯಲೂ ಅವರು ಬಳಸುತ್ತಾರೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಸರ್ಕಾರದ ಪರವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹುಕ್ಕಾಬಾರ್ ಸೇವೆ ಮಾಡಲು ಯಾವುದೇ ಗೊತ್ತುಪಡಿಸಿದ ಪ್ರದೇಶವನ್ನು ನಿಗದಿ ಪಡಿಸಿಲ್ಲ. ಆದರೆ, ಧೂಮಪಾನ ಸೇವೆ ಪ್ರದೇಶದಲ್ಲಿ ಹುಕ್ಕಾವನ್ನು ಸೇವಿಸಬಾರದಾದರೂ, ಬಾರ್‌ಗಳಲ್ಲಿ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹುಕ್ಕಾ ನಿಷೇಧಿಸಲಾಗಿದೆ. ಹುಕ್ಕಾ ನಿಷೇಧ ಕುರಿತಾದ ಅಧಿಸೂಚನೆಯ ಜೊತೆಗೆ ಮಸೂದೆಯನ್ನೂ ಸದನದಲ್ಲಿ ಪಾಸ್ ಮಾಡಲಾಗಿದೆ ಎಂದು ವಾದಿಸಿದರು. ಹುಕ್ಕಾ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗೆಂದು ನಾವು ಸಿಗರೇಟು ಬಳಕೆಗೆ ಉತ್ತೇಜನ ನೀಡಿದಂತಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹುಕ್ಕಾಗೆ ನಿಷೇಧ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸಂವಿಧಾನದ 47ನೇ ವಿಧಿಯ ಅನ್ವಯ ಸಾರ್ವಜನಿಕ ಆರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಹೊಣೆಗಾರಿಕೆ ಹೊಂದಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರು, ಸಿಗರೇಟುಗಳು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಹಿವಾಟು, ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆ ಕಾಯಿದೆ 2003 (ಸಿಒಟಿಪಿಎ) ಕೇಂದ್ರ ಸರ್ಕಾರದ ಕಾನೂನಾಗಿದ್ದು, ಇಲ್ಲಿ ಹುಕ್ಕಾ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಆಹಾರ ಪೂರೈಸದ ನಿರ್ದಿಷ್ಟ ಸ್ಥಳಗಳಲ್ಲಿ ಹುಕ್ಕಾ ಸೇದಲು ಅವಕಾಶವಿದೆ ಎಂದರು.
ಅಲ್ಲದೆ, ಹುಕ್ಕಾ ನಿಷೇಧವು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಸಿಗರೇಟು ಉತ್ಪಾದಕರ ಪರವಾಗಿದೆ. ಹುಕ್ಕಾ ಅಮಲು ಪಾನೀಯ ಅಥವಾ ಮಾದಕ ವಸ್ತುವಲ್ಲ. ಹುಕ್ಕಾ ನಿಷೇಧದಿಂದ ಸಂವಿಧಾನದ 14ನೇ ವಿಧಿ ಉಲ್ಲಂಘನೆಯಾಗಿದೆ. ಒಮ್ಮೆ ಗ್ರಾಹಕರ ಹುಕ್ಕಾ ನಿಷೇಧಿಸಿದರೆ ಅವರು ಸಿಗರೇಟು ಸೇದಲಿದ್ದಾರೆ? ಹುಕ್ಕಾದಲ್ಲಿ ಕನಿಷ್ಠ ಹರ್ಬಲ್ ಸಾರ ಸೇದುತ್ತಾರೆ.. ಆದರೆ, ಯಾವುದೇ ತೆರನಾದ ಹರ್ಬಲ್ ಸಿಗರೇಟು ಇಲ್ಲ ಎಂದರು. ವಾದ ಪ್ರತಿವಾದ ಆಲಿಸಿದ ಪೀಠ ತೀರ್ಪನ್ನು ಕಾಯ್ದಿರಿಸಿದೆ.ಹುಕ್ಕಾಬಾರ್‌ಗಳು ಬೆಂಕಿಯಂತಹ ಅಪಾಯಗಳಿಗೆ ಕಾರಣವಾಗಲಿದೆ. ರಾಜ್ಯದ ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸುರಕ್ಷತೆ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವನೆಗೆ ಅವಕಾಶ ಕಲ್ಪಿಸಿದಲ್ಲಿ ಸಾರ್ವಜನಿಕ ಆಹಾರ ಪದಾರ್ಥಗಳನ್ನು ಅಸುರಕ್ಷಗೊಳಿಸುತ್ತದೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹದು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಿಡಿತ್ತು.
ಅಲ್ಲದೆ, ಈ ಅಧಿಸೂಚನೆಯನ್ನು ಉಲ್ಲಂಘಿಸಿದಲ್ಲಿ ಕೋಪ್ಟಾ ಕಾಯಿದೆ, ಮಕ್ಕಳ ರಕ್ಷಣೆ ಸಂರಕ್ಷಣಾ ಕಾಯಿದೆ, ಭಾರತೀಯ ದಂಡ ಸಂಹಿತೆ ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸುವುದಾಗಿ ಸರ್ಕಾರ ತಿಳಿಸಿತ್ತು. ಹೀಗಾಗಿ ಅರ್ಜಿದಾರು ಕೋರ್ಟ್ ಮೊರೆಹೋಗಿದ್ದರು.