Home Uncategorized ರಾಜ್ಯದಲ್ಲಿ 34 ಕೋವಿಡ್ ಸೋಂಕಿತರಿಗೆ ಒಮೆಕ್ರಾನ್ ಉಪತಳಿ ಜೆ.ಎನ್.1 ಪತ್ತೆ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ 34 ಕೋವಿಡ್ ಸೋಂಕಿತರಿಗೆ ಒಮೆಕ್ರಾನ್ ಉಪತಳಿ ಜೆ.ಎನ್.1 ಪತ್ತೆ: ಸಚಿವ ದಿನೇಶ್ ಗುಂಡೂರಾವ್

27
0

ಬೆಂಗಳೂರು: ಆರೋಗ್ಯ ಇಲಾಖೆ ನಡೆಸಿದ ಜಿನೋಮೊ ಸಿಕ್ವೇನ್ಸಿಂಗ್‍ನಲ್ಲಿ ಸುಮಾರು 34 ಕೋವಿಡ್ ಸೊಂಕಿತರಿಗೆ ಒಮೆಕ್ರಾನ್ ವೈರಾಣು ಉಪತಳಿ ಜೆ.ಎನ್.1 ಸೋಂಕು ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕ ಜೆ.ಎನ್ 1 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಬೆಂಗಳೂರಿನಲ್ಲಿ 20, ಮೈಸೂರು 4, ಮಂಡ್ಯ 3 ಸೇರಿದಂತೆ ರಾಮನಗರದಲ್ಲಿ 1 ಒಮೆಕ್ರಾನ್ ಉಪತಳಿ ಜೆ.ಎನ್.1 ಪತ್ತೆಯಾಗಿದ್ದು, ಇಲ್ಲಿಯವರೆಗೆ ಕೋವಿಡ್ ಬಂದವರಲ್ಲಿ ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ಸಾವನ್ನಪ್ಪಿದವರಲ್ಲೂ ಜೆ.ಎನ್.1 ಪಾಸಿಟಿವ್ ಇರುವುದು ತಿಳಿದು ಬಂದಿದೆ ಎಂದರು.

ಜೆ.ಎನ್.1 ವೈರಾಣು ರಾಜ್ಯದಲ್ಲಿ ಇರಬಹುದು ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ ಅದು ಜಿನೋಮೊ ಸಿಕ್ವೆನ್ಸಿಂಗ್‍ನಲ್ಲೇ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಿಕ್ವೆನ್ಸಿಂಗ್‍ ನಲ್ಲಿ ಎಓ.1 ಪ್ರಕರಣಗಳು ಇರುವುದು ದೃಢಪಟ್ಟಿದೆ. ಆದರೆ ರಾಜ್ಯದ ಜನರು ಕೋವಿಡ್ ಸಂಬಂಧ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಜೆ.ಎನ್.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ದರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಜೆ.ಎನ್.1 ವಿಚಾರದಲ್ಲಿ ಕೇಂದ್ರ ಸರಕಾರದಿಂದ ಯಾವುದೇ ಮಾರ್ಗಸೂಚಿ ಇಲ್ಲ. ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವುದರ ಬಗ್ಗೆ ಯಾವುದೇ ಚಿಂತನೆಗಳಿಲ್ಲ. ಜನಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಜಾರಿ ಮಾಡುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಸಂಬಂಧ ರಚಿಸಲಾಗಿರುವ ಕ್ಯಾಬಿನೆಟ್ ಉಪಸಮಿತಿ ಸಭೆ ಮಂಗಳವಾರ(ಇಂದು) ನಡೆಯಲಿದೆ. ಸಭೆಯಲ್ಲಿ ಜೆ.ಎನ್ 1 ಪ್ರಕರಣಗಳು ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

LEAVE A REPLY

Please enter your comment!
Please enter your name here