ಎಚ್.ಡಿ.ಕೋಟೆ : ರಾಜ್ಯದ ಜನತೆ ಬರಗಾಲಕ್ಕೆ ತುತ್ತಾಗಿದ್ದಾರೆ. ನಮ್ಮ ಜನ ಕಟ್ಟಿದ ತೆರಿಗೆಯಲ್ಲಿನ ಪಾಲು ನಮಗೆ ವಾಪಾಸ್ ಕೊಡಿ, ಬರಗಾಲಕ್ಕೆ ನಮ್ಮ ಪಾಲಿನ ಅನುದಾನ ಕೊಡಿ ಎಂದು ನಾವು ಪತ್ರ ಬರೆದು ಹೋರಾಟ ಮಾಡಿದರೂ ಮೋದಿ ಸರಕಾರ ನಮ್ಮ ಪಾಲಿನ ನಯಾಪೈಸೆ ಕೊಡಲಿಲ್ಲ. ಇಂಥವರಿಗೆ ಮತ ಹಾಕಿದರೆ ಆ ಮತಕ್ಕೆ ಗೌರವ ಬರುತ್ತದೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಚ್.ಡಿ.ಕೋಟೆಯಲ್ಲಿ ನಡೆದ ಬೃಹತ್ ಜನಧ್ವನಿ-2 ಸಭೆಯಲ್ಲಿ ಅವರು ಮಾತನಾಡಿದರು.
“ರಾಜ್ಯದ ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ಆಡಿಸುತ್ತಾರೆ. ಮೋದಿ ರಾಜ್ಯಕ್ಕೆ ಮಾಡಿದ ಅನ್ಯಾಯ ಸರಿ, ಬರಗಾಲ ಬಂದರೂ ಮೋದಿ ಅನುದಾನ ಕೊಡದೇ ಇದ್ದದ್ದೇ ಸರಿ, ಮೋದಿಯವರು ಪೆಟ್ರೋಲ್, ಡೀಸೆಲ್,ಗ್ಯಾಸ್, ರಸಗೊಬ್ಬರ ಬೆಲೆಯನ್ನು ಹೆಚ್ಚಿಸಿದ್ದೇ ಸರಿ ಎಂದು ಬಿಜೆಪಿ ನಾಯಕರು ಕೋಲೆ ಬಸವನಂತೆ ತಲೆ ತೂಗುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ʼವಿದೇಶದಿಂದ ಕಪ್ಪು ಹಣ ತರಲಿಲ್ಲ, ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಆದರೆ ಹೊಸ ಉದ್ಯೋಗ ಸೃಷ್ಟಿ ಮಾಡೋದಿರಲಿ, ಇರೋ ಕೆಲಸಗಳೂ ಬಂದ್ ಆದವು. ಇಂಥವರಿಗೆ ನಿಮ್ಮ ಮತ ಕೇಳುವ ಮುಖ ಇದೆಯಾ?ʼ ಎಂದು ಪ್ರಶ್ನಿಸಿದರು.
ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿಲ್ಲೆಯ ಶಾಸಕರುಗಳಾದ ದರ್ಶನ್ ದ್ರುವನಾರಾಯಣ್, ಗಣೇಶ್ ಮಹದೇವ್ ಪ್ರಸಾದ್, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಕೇಶವಮೂರ್ತಿ, ಡಿಸಿಸಿ ಅಧ್ಯಕ್ಷ ವಿಜಯ್ ಕುಮಾರ್ ಸೇರಿ ಹಲವು ಮಂದಿ ಜಿಲ್ಲಾ, ತಾಲ್ಲೂಕು, ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.