ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಐಎಸಿಸಿ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಐಎಸಿಸಿ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಈ ವೇಳೆ ನಾಯಕರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ.
ಕರ್ನಾಟಕದ ಗೆಲುವಿನ ಶ್ರೇಯಸ್ಸು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಸೇರಿ ಎಲ್ಲ ಹಿರಿಯ ನಾಯಕರಿಗೂ ಸಲ್ಲುತ್ತದೆ. ಭಾರತ್ ಜೋಡೋ ಪಾದಯಾತ್ರೆ ಬಳಿಕ ಕಾಂಗ್ರೆಸ್ ಗೆದ್ದಿದೆ. ಕರ್ನಾಟಕದಲ್ಲಿ ಅನುಭವಿ, ಸಮರ್ಥ ಕಾಂಗ್ರೆಸ್ ನಾಯಕರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷವನ್ನು ಸಂಘಟಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಸಮರ್ಥ ನಾಯಕರು ಎಂದು ಹೇಳಿದರು.
ಡಿಕೆ ಶಿವಕುಮಾರ್ ಒಬ್ಬರು ಮಾತ್ರ ಡಿಸಿಎಂ ಆಗಿರುತ್ತಾರೆ. ಲೋಕಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮುಂದುವರಿಯಲಿದ್ದಾರೆಂದು ತಿಳಿಸಿದರು.
ಮೇ 20ರಂದು ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಾರೆ. ಮೇ 20ರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ. ಮೇ 20ರಂದು ಕೆಲ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆಂದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.
ಈ ನಡುವೆ ನವಹೆದಲಿಯ ರಾಜಾಜಿ ಮಾರ್ಗ್10ರಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿರುವ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು, ಇಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.