ಬೆಂಗಳೂರು : “ರಾಜ್ಯ ಸರಕಾರ ಮೂರು ತಿಂಗಳು ವಿಳಂಬವಾಗಿ ಬರಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಅಷ್ಟರಲ್ಲಿ ಚುನಾವಣೆ ಘೋಷಣೆಯಾಗಿರುವ ಕಾರಣ ಪರಿಹಾರ ನೀಡಲು ಸಾಧ್ಯವಾಗಿಲ್ಲ” ಎಂಬ ಅಪ್ಪಟ ಸುಳ್ಳನ್ನು ರಾಮನಗರದಲ್ಲಿ ಇಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನೀವು ಹೇಳಿದ್ದೀರಿ. ಈ ಸುಳ್ಳನ್ನು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯಾದರೂ ಕುಟುಕಲಿಲ್ಲವೇ?” ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
“ಈ ನಿಮ್ಮ ಸುಳ್ಳಿಗೆ ನಿಮಗೆ ಇಷ್ಟವಾಗಿರುವ ‘’ಕ್ರೊನಾಲಜಿ’’ಯಲ್ಲಿಯೇ ಉತ್ತರ ನೀಡುತ್ತೇನೆ. ನೀವೂ ಸ್ವಲ್ಪ ಕ್ರೊನಾಲಜಿಯನ್ನು ಅರ್ಥ ಮಾಡಿಕೊಳ್ಳಿ.( ಆಪ್ ಬೀ ಝರಾ ಕ್ರೊನಾಲಜಿ ಸಮಜಿಯೇ). ನಾನು ನಿಮ್ಮ ಮುಂದೆ ಇಡುವ ಸತ್ಯವನ್ನು ಸುಳ್ಳೆಂದು ನೀವು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಾನು ನಿವೃತ್ತಿಯಾಗುತ್ತೇನೆ. ನಿಮಗೆ ನಿಮ್ಮ ಮಾತನ್ನು ಸತ್ಯ ಎಂದು ಸಾಬೀತು ಮಾಡಲಾಗದಿದ್ದರೆ ನೀವೇನು ಮಾಡಬೇಕೆಂದು ನೀವೇ ನಿರ್ಧರಿಸಿ” ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
“ಮಳೆ ಅಭಾವದ ಸೂಚನೆ ಸಿಗುತ್ತಿದ್ದಂತೆಯೇ ಜಾಗೃತಗೊಂಡ ರಾಜ್ಯ ಸರಕಾರ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿರುವ ಪ್ರಕೃತಿ ವಿಕೋಪ ಸಂಪುಟ ಉಪಸಮಿತಿಯ ಮೊದಲ ಸಭೆ ನಡೆಸಿದ್ದು 2023ರ ಆಗಸ್ಟ್ 22ರಂದು. ಆ ಸಭೆ ರಾಜ್ಯದ 116 ತಾಲೂಕುಗಳಲ್ಲಿ ಬರಪೀಡಿತವಾಗಿರುವುದನ್ನು ದಾಖಲಿಸಿತ್ತು. ಅದರ ನಂತರ ಸೆಪ್ಟೆಂಬರ್ 22 ರ ವರೆಗೆ ಇದೇ ಸಂಪುಟ ಉಪಸಮಿತಿ ನಾಲ್ಕು ಬಾರಿ ಸಭೆ ನಡೆಸಿ ರಾಜ್ಯದ ಬರಗಾಲದ ಪರಿಸ್ಥಿತಿಯನ್ನು ಪರಿಶೀಲಿಸಿ ಅಂತಿಮವಾಗಿ ಮುಖ್ಯಮಂತ್ರಿಯಾಗಿರುವ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಯಿತು”ಎಂದು ತಿಳಿಸಿದರು.
ʼರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯ ನಡೆಸಲು ಎನ್ ಡಿಆರ್ ಎಫ್ ನಿಂದ 4860 ಕೋಟಿ ರೂ. ನೀಡಬೇಕೆಂಬ ಮೊದಲ ಮನವಿಯನ್ನು ರಾಜ್ಯ ಸರಕಾರ ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಸಲ್ಲಿಸಿದ್ದು 2023ರ ಸೆಪ್ಟೆಂಬರ್ 22ರಂದುʼ ಎಂದು ಹೇಳಿದರು.
“ಈ ಮನವಿಗೆ ಪ್ರತಿಕ್ರಿಯಿಸಿ ಕೇಂದ್ರ ಸರಕಾರದ ಹತ್ತು ಸದಸ್ಯರ ತಜ್ಞರ ತಂಡ 2023ರ ಅಕ್ಟೋಬರ್ ನಾಲ್ಕರಿಂದ ಒಂಬತ್ತರ ವರೆಗೆ ರಾಜ್ಯದ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಿತ್ತು . ಅದರ ನಂತರ ರಾಜ್ಯದ ಬರಪರಿಸ್ಥಿತಿಯ ಮೇಲೆ ನಿರಂತರವಾಗಿ ನಿಗಾ ಇಡುತ್ತಾ ಬಂದಿರುವ ರಾಜ್ಯದ ಸಂಪುಟ ಉಪಸಮಿತಿ ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಬಾರಿ ಮತ್ತು ಸೆಪ್ಟೆಂಬರ್ ನಲ್ಲಿಒಂದು ಬಾರಿ ಸಭೆ ನಡೆಸಿ ಅಂತಿಮವಾಗಿ ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿವೆ ಎಂದು ಘೋಷಿಸಿತು. ಬರಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ನಡೆಸಲು ಎನ್ ಡಿಆರ್ ಎಫ್ ನಿಂದ 18,171.44 ಕೋಟಿ ರೂ. ನೀಡಬೇಕೆಂಬ ಮನವಿಯನ್ನೊಳಗೊಂಡ ವಿವರವಾದ ಪತ್ರವನ್ನು ರಾಜ್ಯ ಸರಕಾರ ಕೇಂದ್ರ ಕೃಷಿ ಸಚಿವರಿಗೆ 2023ರ ನವಂಬರ್ 15ರಂದು ನಾನೇ ಬರೆದಿದ್ದೆ” ಎಂದು ತಿಳಿಸಿದ್ದಾರೆ.
ನವಂಬರ್ 23ರಂದು ರಾಜ್ಯದ ಕಂದಾಯ ಸಚಿವರು ಮತ್ತು ಕೃಷಿ ಸಚಿವರು ಕೇಂದ್ರ ಹಣಕಾಸು ಸಚಿವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಬರಪರಿಹಾರ ಬಿಡುಗಡೆಮಾಡುವಂತೆ ಕೋರಿದ್ದರು.
ಇದರ ನಂತರವೂ ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕವಾಗದೆ ಇದ್ದುದನ್ನು ಕಂಡು 2023ರ ಡಿಸೆಂಬರ್ 19ರಂದು ಮುಖ್ಯಮಂತ್ರಿಯಾದ ನಾನು ಕಂದಾಯ ಸಚಿವರ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವರಾದ ನಿಮ್ಮನ್ನು ಭೇಟಿ ಮಾಡಿ ಬರಪರಿಹಾರಕ್ಕಾಗಿ ಮನವಿ ಮಾಡಿದ್ದೆವು. ಆ ಭೇಟಿಯ ಸಮಯದಲ್ಲಿ ತಾವು ಒಂದು ವಾರದೊಳಗೆ ತಮ್ಮ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯ ಸಭೆ ನಡೆಸಿ ಎನ್ ಡಿಆರ್ ಎಫ್ ನಿಂದ ಪರಿಹಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ನೀವು ಆಶ್ವಾಸನೆ ನೀಡಿದ್ದೀರಿ ಎಂದು ನೆನಪಿಸಿಕೊಂಡರು.
ಅಮಿತ್ ಶಾ ಅವರೇ, ನೀವು ಕೊಟ್ಟ ಒಂದು ವಾರದ ಆಶ್ವಾಸನೆಯ ನಂತರ ಮೂರು ತಿಂಗಳುಗಳು ಉರುಳಿಹೋಗಿದೆ. ಈಗ ರಾಜ್ಯಕ್ಕೆ ಬಂದು ಕರ್ನಾಟಕಕ್ಕೆ ನೀವು ಮಾಡಿರುವ ಘನಘೋರ ಅನ್ಯಾಯವನ್ನು ಮುಚ್ಚಿಹಾಕಲು ಸುಳ್ಳಿನ ಮೊರೆ ಹೋಗಿದ್ದೀರಿ. ಜಾಗೃತ ಕನ್ನಡಿಗರು ನಿಮ್ಮ ಸುಳ್ಳಿಗೆ ಬಲಿಯಾಗುವುದಿಲ್ಲ, ಅವರಿಗೆ ಸತ್ಯ ಗೊತ್ತಿದೆ ಎಂದರು.
ಈಗಲೂ ಕಾಲ ಮಿಂಚಿಲ್ಲ ಬರಪೀಡಿತರ ಬದುಕಿನ ಜೊತೆ ಕೊಳಕು ರಾಜಕೀಯ ಮಾಡಲು ಹೋಗದೆ ತಕ್ಷಣ ಬರಪರಿಹಾರವನ್ನು ಬಿಡುಗಡೆ ಮಾಡಿ. ಇದಕ್ಕೆ ತಪ್ಪಿದ್ದಲ್ಲಿ ರಾಜ್ಯದ ಆರುವರೆ ಕೋಟಿ ಕನ್ನಡಿಗರು ಇದೇ ಲೋಕಸಭಾ ಚುನಾವಣೆಯಲ್ಲಿ ನೀವು ಹೇಳಿರುವ ಸುಳ‍್ಳಿಗೆ ಮತ್ತು ರಾಜ್ಯದ ಜನತೆಗೆ ನಿಮ್ಮ ಸರಕಾರ ಮಾಡಿರುವ ದ್ರೋಹಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.