ಧರ್ಭಾಂಗ್ (ಬಿಹಾರ): ಸಂಪೂರ್ಣ ಸೇತುವೆ ಹಾಗೂ ರಸ್ತೆಯ ಪಥಗಳು ಕಳವಾಗಿವೆ ಎಂಬ ವರದಿಗಳ ಬೆನ್ನಿಗೇ ಬಿಹಾರದಲ್ಲಿ ಮತ್ತೆ ಅಂತಹುದೇ ಅಸಹಜ ದರೋಡೆಯೊಂದು ವರದಿಯಾಗಿದೆ. ಧರ್ಭಾಂಗ್ ಜಿಲ್ಲೆಯಲ್ಲಿ ರಾತ್ರೋರಾತ್ರಿ ಕೆರೆಯನ್ನು ʼಕಳವುʼ ಮಾಡಲಾಗಿದ್ದು, ನೀರಿನ ಪ್ರದೇಶವಿದ್ದ ಜಾಗದಲ್ಲೀಗ ಗುಡಿಸಲೊಂದನ್ನು ನಿರ್ಮಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ಧರ್ಭಾಂಗ್ ನಲ್ಲಿರುವ ಸರ್ಕಾರಿ ಕೆರೆಯೊಂದನ್ನು ಭೂ ಮಾಫಿಯಾ ಕಬಳಿಸಿದೆ ಎಂದು ಆರೋಪಿಸಲಾಗಿದೆ. ನೀರಿದ್ದ ಪ್ರದೇಶಕ್ಕೆ ಮರಳನ್ನು ತುಂಬಿಸಿರುವ ಅವರು, ಅದರ ಮೇಲೆ ಗುಡಿಸಲೊಂದನ್ನು ನಿರ್ಮಿಸಿದ್ದಾರೆ. ರಾತ್ರೋರಾತ್ರಿ ಟ್ರಕ್ ಗಳು ಹಾಗೂ ಯಂತ್ರಗಳು ಓಡಾಡಲು ಪ್ರಾರಂಭಿಸುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದರಿ ಕೆರೆಯನ್ನು ಮೀನು ಸಾಕಾಣಿಕೆ ಹಾಗೂ ಗಿಡಗಳಿಗೆ ನೀರುಣಿಸಲು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.
ದೃಶ್ಯಾವಳಿಗಳಲ್ಲಿ ಆ ಪ್ರದೇಶವನ್ನು ಸಮತಟ್ಟು ಮಾಡಲಾಗಿದ್ದು, ಅದರ ಮೇಲೆ ಕಚ್ಚಾ ಗುಡಿಸಲೊಂದನ್ನು ನಿರ್ಮಿಸಿರುವುದು ಕಂಡು ಬಂದಿದೆ. ಆ ಪ್ರದೇಶದಲ್ಲಿ ಈ ಹಿಂದೆ ಕೆರೆ ಇತ್ತು ಎಂಬ ಗುರುತೂ ಸಿಗದಂತೆ ಅದನ್ನು ಮುಚ್ಚಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್, “ಕಳೆದ 10-15 ದಿನಗಳಲ್ಲಿ ಈ ಭರ್ತಿ ಕಾರ್ಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನು ಬಹುಶಃ ರಾತ್ರಿ ವೇಳೆ ಮಾಡಿರಬಹುದು. ಈ ಜಾಗದ ಮಾಲಕರು ಯಾರು ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ” ಎಂದು ತಿಳಿಸಿದ್ದಾರೆ.
ಸದ್ಯ ಧರ್ಭಾಂಗ್ ಪೊಲೀಸರು ಅಸಹಜ ಕೆರೆ ಕಳವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.