Home ಕರ್ನಾಟಕ ರಾಮಕೃಷ್ಣ ಮಿಷನ್ ಮುಖ್ಯಸ್ಥ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ನಿಧನ

ರಾಮಕೃಷ್ಣ ಮಿಷನ್ ಮುಖ್ಯಸ್ಥ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ನಿಧನ

30
0

ಕೊಲ್ಕತ್ತಾ: ರಾಮಕೃಷ್ಣ ಮಿಷನ್ ನ ಮುಖ್ಯಸ್ಥ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ತಮ್ಮ 94ನೇ ವಯಸ್ಸಿನಲ್ಲಿ ಮಂಗಳವಾರ ರಾತ್ರಿ ನಿಧನರಾದರು. ದಕ್ಷಿಣ ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮಿಷನ್ ಹೇಳಿದೆ. ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನದ ಹೇಳಿಕೆ ಪ್ರಕಾರ ರಾತ್ರಿ 8.14ಕ್ಕೆ ಅವರು ಮೃತಪಟ್ಟಿದ್ದಾರೆ.

ಸ್ಮರಣಾನಂದ ಅವರನ್ನು ಜನವರಿ 29ರಂದು ಮೂತ್ರನಾಳ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 3ರಂದು ಅವರನ್ನು ಉಸಿರಾಟದ ತೊಂದರೆಯ ಕಾರಣದಿಂದ ಕೃತಕ ಉಸಿರಾಟದ ವ್ಯವಸ್ಥೆಗೆ ದಾಖಲಿಸಲಾಗಿತ್ತು.

ಅವರಿಗೆ ತೀವ್ರ ಸ್ವರೂಪದ ಮೂತ್ರಪಿಂಡ ಸಮಸ್ಯೆ ಕಾಡುತ್ತಿತ್ತು ಮತ್ತು ಹಿಮೊಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು ಆಸ್ಪತ್ರೆ ಮೂಲಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

“ಮೃತರ ಅಂತ್ಯಸಂಸ್ಕಾರ ಬೇಲೂರು ಮಠದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದೆ. ಭಕ್ತರು ಮತ್ತು ಅನುಯಾಯಿಗಳು ಬುಧವಾರ ರಾತ್ರಿ 8 ಗಂಟೆಯವರೆಗೆ ಅಂತಿಮ ನಮನ ಸಲ್ಲಿಸಬಹುದಾಗಿದೆ. ರಾತ್ರಿ 9 ರ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುವುದು” ಎಂದು ಆರ್ ಕೆಎಂ ಕಾರ್ಯದರ್ಶಿ ಸ್ವಾಮಿ ಸುವೀರಾನಂದ ಹೇಳಿದ್ದಾರೆ.

“ರಾಮಕೃಷ್ಣ ಮಠ ಮತ್ತು ಮಿಷನ್ ನ ಅಧ್ಯಕ್ಷ ಶ್ರೀಮತ್ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ನಿಧನದಿಂದ ಅತೀವ ದುಃಖವಾಗಿದೆ. ರಾಮಕೃಷ್ಣರ ಅನುಯಾಯಿಗಳಿಗೆ ಜೀವನವಿಡೀ ವಿಶ್ವಾದ್ಯಂತ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿದ ಮಹಾನ್ ಸಂತ” ಎಂದು ಮಮತಾ ಬ್ಯಾನರ್ಜಿ ಶೋಕಸಂದೇಶದಲ್ಲಿ ಬಣ್ಣಿಸಿದ್ದಾರೆ.

LEAVE A REPLY

Please enter your comment!
Please enter your name here